ಮಂಡ್ಯ: ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ರೈಲಿನಲ್ಲೆ ಮೂರ್ಛೆ ರೋಗಿಯೊಬ್ಬರು ನರಳಿ ನರಳಿ ಪ್ರಾಣ ಬಿಟ್ಟ (Death in Train) ಘಟನೆ ನಡೆದಿದೆ.
ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ( 83) ಸಾವಿಗೀಡಾದವರು. ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೇಂಜರ್ ರೈಲಿನಲ್ಲಿ ಅವರು ಪ್ರಯಾಣಿಸುತ್ತಿದ್ದರು. ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದರು. ಸಹ ಪ್ರಯಾಣಿಕರಿಂದ ಮೈಸೂರಿನಲ್ಲೆ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.
ಮಾಹಿತಿ ಕೊಟ್ಟರೂ ಸಿಬ್ಬಂದಿಗಳು ಚಿಕಿತ್ಸೆ ಕೊಡಿಸಿರಲಿಲ್ಲ. ಮೈಸೂರಿನಲ್ಲಿ ಮೂರ್ಛೆ ರೋಗಿಯನ್ನು ಇಳಿಸಲೂ ಸಿಬ್ಬಂದಿ ಮುಂದಾಗಿರಲಿಲ್ಲ. ಮೈಸೂರಿನಿಂದ ಮಂಡ್ಯದವರೆಗೂ ಎಲ್ಲಿಯೂ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ ಸ್ವಾಮಿ ಸಾವಿಗೀಡಾಗಿದ್ದಾರೆ.
ರೈಲಿನ ಎಲ್ಲ ನಿಲ್ದಾಣಗಳಲ್ಲಿಯೂ ರೈಲ್ವೆ ಪೊಲೀಸರಿಗೂ ತಿಳಿಸಿದರೂ ಚಿಕಿತ್ಸೆ ಕೊಡಿಸಲಿಲ್ಲ. ರೈಲ್ವೆ ಅಧಿಕಾರಿಗಳು, ಪೊಲೀಸರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಹ ಪ್ರಯಾಣಿಕರು ಆರೋಪಿಸಿದ್ದಾರೆ. ಮಂಡ್ಯದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತನ ಸಾವು ಸಿಐಡಿ ತನಿಖೆಗೆ
ದಾವಣಗೆರೆ: ಕೋಟ್ಯಂತರ ರೂಪಾಯಿ ಭೂ ಅಕ್ರಮದ ಆರೋಪಿಯಾಗಿದ್ದ ಹರೀಶ್ ಹಳ್ಳಿ (Harish Halli) ಎಂಬಾತ ಪೊಲೀಸ್ ಕಾರಿನಿಂದ (Police Vehicle)ನಿಂದ ಜಿಗಿದು ಮೃತಪಟ್ಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಪೊಲೀಸ್ ವಶದಲ್ಲಿದ್ದ ಆರೋಪಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಭಾನುವಾರ ಬೆಳಗಿನ ಜಾವ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿಯನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆತರುತ್ತಿದ್ದರು. ಈ ಸಂದರ್ಭದಲ್ಲಿ ಆತ ಕಾರಿನಿಂದ ಜಿಗಿದು ಪ್ಲೈಒವರ್ ಮೇಲಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದ ಎಂದು ಪೊಲೀಸರು ಹೇಳಿದ್ದರು.
ಹರೀಶ್ ಹಳ್ಳಿ ಆರ್‌ಟಿಐ ಕಾರ್ಯಕರ್ತನಾಗಿದ್ದು, ಒಟ್ಟು 2 ಕೋಟಿ ರೂ.ಬೆಲೆಯ ಮೂರು ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡ ಆರೋಪ ಎದುರಿಸುತ್ತಿದ್ದ. ಈ ಭೂ ಅಕ್ರಮ ಕೇಸ್ನಡಿ ಹರೀಶ್ ಹಳ್ಳಿ, ಸಬ್ ರಿಜಿಸ್ಟ್ರಾರ್ ಆರ್.ಎಲ್.ವೀಣಾ ಸೇರಿ ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈತ ಸೈಟ್ನ್ನು ತನ್ನದಾಗಿಸಿಕೊಳ್ಳಲು ನಕಲಿ ಮಾಲೀಕರನ್ನೇ ಸೃಷ್ಟಿಸಿದ್ದ. ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Video : ಬೆಚ್ಚಿ ಬೀಳಿಸುತ್ತದೆ ಮೈಸೂರಿನ ಭೀಕರ ಅಪಘಾತದ ಸಿಸಿಟಿವಿ ದೃಶ್ಯ