ಮಂಡ್ಯ: ರಾಜ್ಯದ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊಂದು ಅಮೆರಿಕದ ಪ್ರಸಿದ್ಧ ಯೂನಿವರ್ಸಿಟಿ ಜತೆ ಪರಸ್ಪರ ಶೈಕ್ಷಣಿಕ (Educational Institution) ಒಪ್ಪಂದ ಮಾಡಿಕೊಂಡ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಎಸ್.ಟಿ.ಜಿ. ಪಬ್ಲಿಕ್ ಶಾಲೆಯಲ್ಲಿ ನಡೆದ ಸಮಾರಂಭ ಸಾಕ್ಷಿಯಾಗಿದೆ.
ಚಿನಕುರಳಿ ಗ್ರಾಮದಲ್ಲಿರುವ ಮಾಜಿ ಸಚಿವ, ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಒಡೆತನದ ಎಸ್.ಟಿ.ಜಿ. ಪಬ್ಲಿಕ್ ಶಾಲೆಯಲ್ಲಿ ಅಮೆರಿಕದ ಸಾಗಿನವ್ ವ್ಯಾಲಿ ಯೂನಿವರ್ಸಿಟಿಯೊಂದಿಗೆ ಮೈತ್ರೀಮ್ ಭಜತ ಹೆಸರಿನಡಿ ವಿದ್ಯಾರ್ಥಿ ವಿನಿಮಯ ಒಪ್ಪಂದ ಶುಕ್ರವಾರ ನಡೆದ ಸಮಾರಂಭದಲ್ಲಿ ಏರ್ಪಟ್ಟಿತ್ತು.
ಎಸ್.ಟಿ.ಜಿ. ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಒಪ್ಪಂದ ವಿನಿಯೋಗಕ್ಕೆ ಎಸ್.ಟಿ.ಜಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಮತ್ತು ಅಮೆರಿಕದ ಸಾಗಿನವ್ ವ್ಯಾಲಿ ಯೂನಿರ್ವಸಿಟಿ ಮುಖ್ಯಸ್ಥ ಡಾ.ಜೇಮ್ಸ್ ಇ.ತಾರ್ ಅವರು ಪರಸ್ಪರ ಸಹಿ ಹಾಕಿ, ಕಡತ ಹಸ್ತಾಂತರ ಮಾಡಿದರು.
ಅಮೆರಿಕ ಯೂನಿವರ್ಸಿಟಿ ಅಡಿಯಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮ ಶಿಕ್ಷಣ ವ್ಯವಸ್ಥೆಯನ್ನು ಎಸ್.ಟಿ.ಜಿ. ಶಿಕ್ಷಣ ಸಂಸ್ಥೆಯಲ್ಲಿ ಕಲ್ಪಿಸುವ ಶೈಕ್ಷಣಿಕ ಒಪ್ಪಂದ ಇಲ್ಲಿ ಏರ್ಪಟ್ಟಿದೆ. ಈ ಒಪ್ಪಂದದಿಂದ ಗ್ರಾಮೀಣ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವೊಂದು ತೆರೆದುಕೊಂಡಂತಾಗಿದೆ.
ಎಸ್.ಟಿ.ಜಿ. ಶಿಕ್ಷಣ ಸಂಸ್ಥೆ ಹಾಗೂ ಸಾಗಿನವ್ ವ್ಯಾಲಿ ಯೂನಿವರ್ಸಿಟಿ ಶಿಕ್ಷಕರ ವರ್ಗ ಹಾಗೂ ವಿದ್ಯಾರ್ಥಿಗಳು ಪರಸ್ಪರ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವುದು, ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ ಮತ್ತಿತರೆ ಕಾರ್ಯಕ್ರಮಗಳ ಬಗ್ಗೆ ಸಂವಾದ, ಮಾಹಿತಿ ವಿನಿಮಯ, ಚಟುವಟಿಕೆಗಳನ್ನು ನಡೆಸುವುದು ಒಪ್ಪಂದದಲ್ಲಿ ಅಡಕವಾಗಿದೆ.
ಅಮೆರಿಕ ಮತ್ತು ಭಾರತದ ಶಿಕ್ಷಣ ಪದ್ಧತಿಯನ್ನು ಪರಸ್ಪರ ಅರ್ಥ ಮಾಡಿಕೊಳ್ಳುವ ಅವಕಾಶ ನಮಗೆ ಎಸ್.ಟಿ.ಜಿ. ಶಿಕ್ಷಣ ಸಂಸ್ಥೆಯ ಮೂಲಕ ಒದಗಿಬಂದಿದೆ. ಇಂತಹ ಸುವರ್ಣಾವಕಾಶ ದೊರಕಿಸಿಕೊಟ್ಟ ಸಂಸ್ಥೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಮೆರಿಕದ ಸಾಗಿನವ್ ವ್ಯಾಲಿ ಯೂನಿರ್ವಸಿಟಿ ಮುಖ್ಯಸ್ಥ ಡಾ.ಜೇಮ್ಸ್ ಇ.ತಾರ್ ಹೇಳಿದರು.
ಇದನ್ನೂ ಓದಿ| IT Raid | ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ನಾನ್ ಸ್ಟಾಪ್
ಗ್ರಾಮೀಣ ಪ್ರದೇಶದ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಬೇಕು ಎಂಬುದು ಮೇಲುಕೋಟೆ ಶಾಸಕರೂ ಆಗಿರುವ ನನ್ನ ತಂದೆ ಸಿ.ಎಸ್.ಪುಟ್ಟರಾಜು ಅವರ ಆಸೆಯಾಗಿತ್ತು. ಅದರಂತೆ ಅಮೆರಿಕದ ಸಾಗಿನವ್ ವ್ಯಾಲಿ ಯೂನಿರ್ವಸಿಟಿ ಜತೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಸ್.ಟಿ.ಜಿ. ಸಂಸ್ಥೆ ಸಿಇಒ ಶಿವರಾಜ್ ತಿಳಿಸಿದರು.
ಇದೇ ವೇಳೆ ಅಮೆರಿಕಾದ ಸಾಗಿನವ್ ಯೂನಿವರ್ಸಿಟಿ ಮುಖ್ಯಸ್ಥರು ಮತ್ತು ಪ್ರತಿನಿಧಿಗಳಿಗೆ ಮೈಸೂರು ದಸರಾ ಅಂಬಾರಿಯ ಸ್ಮರಣಿಕೆ ನೀಡುವ ಮೂಲಕ ಎಸ್.ಟಿ.ಜಿ. ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.
ಸಮಾರಂಭದಲ್ಲಿ ಎಸ್.ಟಿ.ಜಿ. ಸಂಸ್ಥೆ ಕಾರ್ಯಕಾರಿ ಮಂಡಳಿ ಸದಸ್ಯರಾದ ನಾಗಮ್ಮ ಪುಟ್ಟರಾಜು, ಡಾ.ಡೇವಿಡ್ ಇ.ಸಿನೆ, ಮಹೇಂದ್ರ ಎಸ್.ಕನಿಹಿ, ಅರ್.ಎಸ್.ಖರ್ಲಿ, ಎಂ.ಎ.ಮಾಚಮ್ಮ, ಸಿ.ಅಶೋಕ್, ನಿವೇದಿತಾ ನಾಗೇಶ್, ಗೀತಾ ಕಂಠಿ ಭಾಗವಹಿಸಿದ್ದರು.
ಇದನ್ನೂ ಓದಿ| ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ, ಇಡಿ ತನಿಖೆ ಸಾಧ್ಯತೆ