Site icon Vistara News

Elephant Attack : ಮಂಡ್ಯದಲ್ಲಿ ಆನೆ ದಾಳಿಗೆ ಮಹಿಳೆ ಬಲಿ; ಹೊಲಕ್ಕೆ ಹೋದಾಗ ಅಟ್ಯಾಕ್

Elephant attacks and kills woman

ಮಂಡ್ಯ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆನೆಗಳ ದಾಳಿ (Elephant Attack) ವಿಪರೀತವಾಗುತ್ತಿದೆ. ಕಳೆದ ಕೆಲವೇ ದಿನಗಳಲ್ಲಿ ಹಲವರು ಆನೆಯ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಮಂಡ್ಯದ (Mandya news) ಲಾಳನಕೆರೆ-ಪೀಹಳ್ಳಿ ಗ್ರಾಮದ ಬಳಿ ಕಾಡಾನೆ ತುಳಿತಕ್ಕೆ ರೈತ ಮಹಿಳೆ (Woman farmer killed by Elephant) ಸಾವನ್ನಪ್ಪಿದ್ದಾರೆ.

ಲಾಳನಕೆರೆ ಗ್ರಾಮದ ಸಾಕಮ್ಮ ಎಂಬವರು ಬೆಳಗ್ಗೆ ಜಮೀನಿನ ಬಳಿ ಹೋಗಿದ್ದಾಗ ಅಲ್ಲೇ ಇದ್ದ ಆನೆ ಅವರನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಿ ಕೊಂದು ಹಾಕಿದೆ. ಒಂಟಿ ಆನೆ ದಾಳಿಗೆ ಸಾಕಮ್ಮ ಮೃತಪಟ್ಟಿದ್ದಾಳೆ ಎಂದು ಗ್ರಾಮಸ್ಥರ ಹೇಳಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ದೌಡಾಯಿಸಿದ್ದಾರೆ.

Elephant Mandya1

ಮಹಿಳೆಯನ್ನು ಕೊಂದ ಆನೆಯೂ ಪತ್ತೆಯಾಗಿದ್ದು, ಅದು ತೋಟವನ್ನು ದಾಟಿ ವಿಸಿ ನಾಲೆಯಲ್ಲಿ ಈಜಾಡುತ್ತಿರುವುದು ಕಂಡುಬಂದಿದೆ. ಕಬ್ಬಿನ ಗದ್ದೆಯಲ್ಲಿ ಬಿಡಾರ ಹೂಡಿರುವ ಒಂಟಿಸಲಗ ಸಾಕಷ್ಟು ಹಾನಿಯನ್ನು ಮಾಡಿದೆ.

ಚಿಕ್ಕಮಗಳೂರಿನ ಕಾಫಿ ತೋಟದಲ್ಲೂ ಹೀಗೇ ಆಗಿತ್ತು

ಕೆಲವೇ ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ವಲಯದ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಮುಂಜಾನೆ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ವೀಣಾ (45) ಎಂಬ ಮಹಿಳೆಯನ್ನು ಆನೆ ಕೊಂದು ಹಾಕಿತ್ತು. ಚಿಕ್ಕಮಗಳೂರಿನಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದರು.

ಕಾಡಾನೆ ತುಳಿತಕ್ಕೆ ಹಾಡಿ ನಿವಾಸಿ ಬಲಿ

ನಾಗರಹೊಳೆ ಅರಣ್ಯ (Nagarahole forest) ಪ್ರದೇಶದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಎಚ್.ಡಿ ಕೋಟೆ ತಾಲ್ಲೂಕು ಮಾಸ್ತಿ ಗುಡಿ ಪುನರ್ವಸತಿ ಕೇಂದ್ರದ ನಿವಾಸಿ ವಸಂತ (36) ಎಂಬವರು ಕೂಡಾ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದರು. ಮುಂಜಾನೆ ಜೋಳದ ಹೊಲದಲ್ಲಿ ವಸಂತ ಬರ್ಹಿದೆಸೆಗೆ ತೆರಳಿದ ವೇಳೆ ಹೊಲದಲ್ಲಿದ್ದ ಕಾಡಾನೆ ದಾಳಿ ನಡೆಸಿದೆ. ಕತ್ತಲಲ್ಲಿ ಕಾಡಾನೆ ಇರುವುದು ಕಾಣಿಸದ ಪರಿಣಾಮ ವಸಂತ ಅದರ ಹತ್ತಿರಕ್ಕೆ ಹೋಗಿದ್ದು, ಕ್ಷಣಾರ್ಧದಲ್ಲಿ ಆನೆ ಇವರನ್ನು ಕಾಲಿನಡಿ ಹೊಸಕಿ ಹಾಕಿತ್ತು.

ಇದನ್ನೂ ಓದಿ: Elephant Attack : ಒಂದಲ್ಲ, ಎರಡಲ್ಲ.. ಒಂದೇ ತೋಟಕ್ಕೆ 20ಕ್ಕೂ ಅಧಿಕ ಆನೆಗಳ ಲಗ್ಗೆ!

ಬಂಡೀಪುರ ಬಳಿ ಮುಂಜಾನೆಯೇ ಒಂಟಿ ಸಲಗ ದಾಳಿಗೆ ರೈತ ಬಲಿ

ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮೊಳೆಯೂರು ಅರಣ್ಯ ವ್ಯಾಪ್ತಿಯ ನಡಹಾಡಿ ಗ್ರಾಮದಲ್ಲಿ ಚಿಕ್ಕೇಗೌಡ (65) ಎಂಬವರ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿತ್ತು.

ಮೈಸೂರು, ಹಾಸನ, ಕೊಡಗಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ

ರಾಜ್ಯದಲ್ಲಿ ಆನೆಗಳ ದಾಳಿ ವಿಪರೀತವಾಗಿದ್ದು ಜನರು ಭಯದಿಂದ ನಡುಗುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಮೈಸೂರು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅಪಾಯ ಮೇರೆ ಮೀರಿದೆ.

ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್‌ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು. RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು.

ಕಳೆದ ಆಗಸ್ಟ್‌ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.

ಅಂದು ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

Exit mobile version