Site icon Vistara News

Kanaka Jayanthi | ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ಮಾಜಿ ಸಿಎಂ ಸಿದ್ದರಾಮಯ್ಯ

kanaka Jayanthi

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್‌ನಿಂದ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಗೆಲ್ಲಿಸಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿಯರವನ್ನು ಗೆಲ್ಲಿಸಿದರೆ ಬೊಮ್ಮಾಯಿಗೆ ಶಕ್ತಿ ಬರುತ್ತದೆ. ಹೀಗಾಗಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ (Kanaka Jayanthi) ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ | Ravana controversy | ಖರ್ಗೆಯನ್ನು ಧೃತರಾಷ್ಟ್ರನಿಗೆ ಹೋಲಿಸಿದ ರವಿಕುಮಾರ್‌, ಸೋನಿಯಾಗೂ ಪುತ್ರ ವ್ಯಾಮೋಹ ಅಂದ್ರು

ನಾನು ಸಿಎಂ ಆದ ಕೂಡಲೇ ಎಲ್ಲರಿಗೂ ಉಚಿತವಾಗಿ 7 ಕೆ.ಜಿ ಅಕ್ಕಿ ಕೊಟ್ಟೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು 5 ಕೆ.ಜಿಗೆ ಇಳಿಸಿತು. ವಿದ್ಯಾಸಿರಿ ಕೊಟ್ಟೆ ಅದನ್ನೂ ನಿಲ್ಲಿಸಲಾಯಿತು, ಇಂದಿರಾ ಕ್ಯಾಂಟೀನ್ ಸಹ ನಿಲ್ಲಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಕೊಡುತ್ತೇವೆ. ಬಿಜೆಪಿಯವರ ಮನೆ ಹಾಳಾಗ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ. ಇವರು ಮತ್ತೆ ಅಧಿಕಾರಕ್ಕೆ ಬರಬೇಕಾ? ನೀವೆಲ್ಲಾ ನನ್ನ ಮೇಲೆ ಪ್ರೀತಿ ಅಭಿಮಾನ ತೋರಿಸುತ್ತೀರಿ, ಅದಕ್ಕೆ ಬೆಲೆ ಸಿಗಬೇಕಾದರೆ ನಾನು ಹೇಳಿದವರಿಗೆ ಮತ ನೀಡಿ ಗೆಲ್ಲಿಸಿ ನನಗೆ ಶಕ್ತಿ ನೀಡಬೇಕು ಎಂದು ಪರೋಕ್ಷವಾಗಿ ಸಿಎಂ ಆಗಲು ಬೆಂಬಲ ಕೋರಿದರು.

ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಹಾಗಾಗಿ ಮಹಾನ್ ವ್ಯಕ್ತಿಗಳಾಗಿದ್ದರಿಂದ ಕನಕದಾಸ ಅವರಂತಹ ಜಯಂತಿಯನ್ನು ಆಚರಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಇವತ್ತಿನವರ ರೀತಿಯಲ್ಲಿ ನಕಲಿ ದೇಶಭಕ್ತನಾಗಿರಲಿಲ್ಲ. ಆತ ಮಹಾನ್ ದೇಶ ಭಕ್ತನಾಗಿದ್ದ. ಅಂತಹ ವ್ಯಕ್ತಿಯನ್ನು ನಮ್ಮವರೇ ಬ್ರಿಟಿಷರಿಗೆ ಹಿಡಿದುಕೊಟ್ಟರು. ರಾಯಣ್ಣರ ಊರನ್ನು ಅಭಿವೃದ್ಧಿಪಡಿಸಲು ನಾನು ಸಿಎಂ ಆಗಿದ್ದಾಗ 272 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಈಗ ಅದರ ಕೆಲಸ ನಡೆಯುತ್ತಿದೆ. ಆರು ತಿಂಗಳಲ್ಲಿ ಆ ಕೆಲಸ ಮುಗಿಯಬಹುದು ಎಂದರು.

ಕನಕದಾಸರು ಕುರುಬ ಜಾತಿಯಲ್ಲಿ ಹುಟ್ಟಿದ್ದಾರೆ, ಆದರೆ ಅವರು ಯಾವುದೇ ಜಾತಿಗೆ ಸೀಮಿತರಲ್ಲ. ಅವರ ತಂದೆ ಹೆಸರು ಬೀರಪ್ಪ ನಾಯಕ, ತಾಯಿ ಬಚ್ಚಮ್ಮ. ಅವರ ಮೂಲ ಹೆಸರು ತಿಮ್ಮಪ್ಪ ನಾಯಕ, ಪಾಳೇಗಾರಾಗಿದ್ದ ಅವರು, ಯುದ್ಧ ಮಾಡಿ ಅದರಲ್ಲಿ ಸೋತಿದ್ದರಿಂದ ನೋವು ಅನುಭವಿಸಿದ ಮೇಲೆ ದಾಸ ದೀಕ್ಷೆ ಸ್ವೀಕರಿಸಿದರು. ನಂತರ ಅವರು ದೇವರನ್ನು ನೋಡಲು ಉಡುಪಿಗೆ ಹೋದಾಗ ಅಲ್ಲಿನ ಪುರೋಹಿತರು ನೀನು ಶೂದ್ರ ನಿನ್ನನ್ನ ದೇವಸ್ಥಾನದ ಒಳಗೆ ಬಿಡಲ್ಲ ಎಂದರು. ಆದರೆ ಸಾಕ್ಷಾತ್ ಶ್ರೀಕೃಷ್ಣ ಹಿಂದೆ ತಿರುಗಿ ಕನಕರಿಗೆ ದರ್ಶನ ನೀಡಿದ್ದರು. ಹಾಗಾಗಿ ಆ ಕಿಂಡಿಗೆ ಕನಕನ ಕಿಂಡಿ ಎಂಬ ಹೆಸರು ಬಂದಿದೆ ಎಂದು ಹೇಳಿದರು.

ಬೆಂಗಳೂರಿನ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರ ಸಹಕಾರ ಇಲ್ಲದೇ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೂ ನಿಮ್ಮ ಬೆಂಬಲ ಇರಬೇಕು ಎಂದು ಹೇಳಿದರು.

ಮಳವಳ್ಳಿ ಶಿವಣ್ಣ ಮಾತನಾಡಿ, ಮಾರಿಕಣ್ಣು ಹೋರಿ ಮ್ಯಾಲೆ ಅನ್ನೊ ಹಾಗೆ ಬಿಜೆಪಿಯವರು ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ನೀವೆಲ್ಲ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಸಂಕಲ್ಪ ಮಾಡಬೇಕು. ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ನೀಡುವಂತಹ ಆಡಳಿತ ನೀಡಲು ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯ. ಹೀಗಾಗಿ ಈ ಬಾರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಜೆಪಿಯವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎನ್ನುತ್ತಾರೆ. ಈ ರೀತಿಯಾಗಿ ಮಾತನಾಡುವ ಮೊದಲು ನಿಮ್ಮ ಕೆಲಸದ ಬಗ್ಗೆ ಮಾತಾಡಿ ಎಂದು ಕಿಡಿಕಾರಿ, ಈ ಹಿಂದೆ ಕುರುಬರು ಕೂಡಿದರೆ ಕೆಟ್ಟರು ಎನ್ನುತ್ತಿದ್ದರು. ಆದರೆ ಈಗ ಸಮುದಾಯರೆಲ್ಲ ಕೂಡಿ ಸಂಘಟಿತರಾಗುತ್ತಿದ್ದಾರೆ.
ನಾವು ಕುರುಬರು ಎಂದು ಹೇಳಿಕೊಳ್ಳಲು ಸಾಧ್ಯವಾಗಿದ್ದೇ ಸಿದ್ದರಾಮಯ್ಯ ಅವರಿಂದ ಎಂದು ಹೇಳಿದರು.

ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ಶಾಸಕರೆಲ್ಲರೂ, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದರು. ಆದರೆ ಸಿದ್ದರಾಮಯ್ಯ ಹಿರಿಯರ ಮಾತಿಗೆ ಓಗೊಟ್ಟು ಜೆ.ಎಚ್.ಪಟೇಲರು ಸಿಎಂ ಆಗಲು ಬೆಂಬಲಿಸಿದರು. ಆಗ ಎಚ್.ಡಿ. ದೇವೇಗೌಡರು ಸಿದ್ದರಾಮಯ್ಯ ಒಬ್ಬ ವ್ಯಕ್ತಿ ಅಲ್ಲ, ಅವರೊಂದು ಶಕ್ತಿ ಎಂದಿದ್ದರು. ಆಗ ನನಗೆ ಏನಪ್ಪ ಇವರು ಸಿದ್ದರಾಮಯ್ಯರನ್ನು ಸಿಎಂ ಮಾಡಲಿಲ್ಲ, ಈಗ ನೋಡಿದರೆ ಅವರೊಬ್ಬ ಶಕ್ತಿ ಎನ್ನುತ್ತಿದ್ದಾರೆ ಎಂದು ಬೇಸರವಾಗಿತ್ತು. ಆದರೆ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಜನಸಾಗರ ನೋಡಿ ಅವರ ಮಾತು ನಿಜ ಎನ್ನಿಸಿತು ಎಂದರು.

ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಜನಪರ ಕಾರ್ಯಕ್ರಮ, ಭಾಗ್ಯಗಳು ಮತ್ತೆ ಬೇಕೆಂದರೆ ಅಧಿಕಾರದಲ್ಲಿ ಸಿದ್ದರಾಮಯ್ಯ ಇರಬೇಕು. ನಾನು ಎಲ್ಲರ ಪರವಾಗಿ ಕೇಳುತ್ತಿದ್ದೇನೆ, ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದ ಅವರು, ಸಿದ್ದರಾಮಯ್ಯ ಆಧುನಿಕ ಅಂಬೇಡ್ಕರ್ ಎಂದು ಹಾಡಿ ಹೊಗಳಿದರು. ಈ ವೇಳೆ ಸಿದ್ದರಾಮಯ್ಯ ಮುಂದಿನ ಎಂಬ ಘೋಷಣೆಗಳು ಮೊಳಗಿದವು.

ಇದನ್ನೂ ಓದಿ | Defection politics | ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರಾ ವಲಸಿಗ ಬಾಂಬೇ ಬಾಯ್ಸ್‌? ಖಂಡ್ರೆ ಹೇಳ್ತಿರೋದು ನಿಜಾನಾ?

Exit mobile version