Site icon Vistara News

Hanuman Flag: ಎಚ್.ಡಿ. ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರು: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah attack to HDK

ತುಮಕೂರು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಭಗವಾಧ್ವಜ (ಹನುಮಧ್ವಜ – Hanuman Flag) ಹಾರಿಸಿದ್ದರ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಪ್ರತಿಭಟನೆ ಮಾಡಲು ಹೋಗುತ್ತಾರೆ ಎಂದರೆ ಇದು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವುದಾಗಿದೆ. ಅಲ್ಲದೆ, ಪ್ರಚೋದನೆ ನೀಡಲು ಮಾಡುತ್ತಿರುವ ರಾಜಕೀಯ ಕುತಂತ್ರವಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಇಲ್ಲ. ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದರು.

ಅವರು ಸೋಮವಾರ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿರುವುದರಿಂದ ಈಗ ಬಿಜೆಪಿಯ ವಕ್ತಾರರಾಗಿದ್ದಾರೆ. ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಪಕ್ಷದ ಹೆಸರಿನ ಜತೆಗೆ ಜಾತ್ಯತೀತ ಎಂದು ಇಟ್ಟುಕೊಂಡಿದ್ದಾರೆ. ಜಾತ್ಯತೀತ ಎಂದರೆ ಏನು? ಬಿಜೆಪಿ ಅವರೊಂದಿಗೆ ಸೇರಿಕೊಂಡರೆ ಇವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಅವರು ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ. ಹೆಸರಿನಲ್ಲಿ ರಾಮ ಇದ್ದರೆ ಸಾಲದು ನಡವಳಿಕೆ ಸರಿಯಾಗಿರಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ ಎಂದು ತಿರುಗೇಟು ನೀಡಿದರು.

ಮುಚ್ಚಳಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ

ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸುತ್ತೇವೆ, ಯಾವುದೇ ಧರ್ಮದ ಧ್ವಜವನ್ನು ಹಾಕುವುದಿಲ್ಲ ಎಂದು ಹೇಳಿ ಅದನ್ನು ಉಲ್ಲಂಘಿಸಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಬ್ಬರಿಗೆ ಲಾಠಿ ಚಾರ್ಜ್ ವೇಳೆ ಗಾಯವಾಗಿದೆ ಎಂಬ ಮಾಧ್ಯಮದವರು ಗಮನಕ್ಕೆ ತಂದಾಗ, ಪೊಲೀಸರಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರಿಗೆ ಹೊಡೆದರೆ ಏನು ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಸುಮ್ಮನೆ ಆರೋಪ ಮಾಡಿದ್ದಾರೆ

ಧ್ವಜದ ವಿಚಾರದಲ್ಲಿ ನಕಲಿ ದಾಖಲೆ ಸೃಷಿಯಾಗಿದ್ದು, ಘಟನೆಗೆ ಜಿಲ್ಲಾಧಿಕಾರಿ ಕಾರಣ, ಅವರು ಅಮಾನತು ಆಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನು ಗೊತ್ತಿದೆ. ಅವರು ಹೇಳಿದ್ದನ್ನು ಈವರೆಗೆ ಸಾಬೀತು ಮಾಡಿದ್ದಾರೆಯೇ? ಸುಮ್ಮನೆ ಆರೋಪ ಮಾಡಬೇಕೆಂದು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾನೂನನ್ನು ಯಾರೇ ಕೈಗೆತ್ತಿಕೊಂಡರೆ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೋಮುವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ

ನಿನ್ನೆ ಚಿತ್ರದುರ್ಗದಲ್ಲಿ ನಡೆದ ಅಹಿಂದ ಸಮಾವೇಶದಿಂದಾಗಿ ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಯಾವುದೇ ವಿಷಯವಿಲ್ಲದೆ ಇಂಥ ಕಡೆ ಕೋಮುವಿಷಯಗಳನ್ನು ಮುಂದಕ್ಕೆ ತರುತ್ತಾರೆ ಎಂದರು.

ಸರ್ಕಾರ ಹೇಗೆ ಬೀಳುತ್ತದೆ?

ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸರ್ಕಾರ ಬಿದ್ದುಹೋಗಲಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು 136 ಜನ ಗೆದ್ದಿದ್ದೇವೆ. ಶೇ. 43ರಷ್ಟು ಮತಗಳು ನಮಗೆ ಬಂದಿವೆ. ಹೇಗೆ ಬಿದ್ದುಹೋಗುತ್ತದೆ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Caste Census: ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ? ಅವಧಿ ವಿಸ್ತರಣೆಗೆ ಹಿಂದುಳಿದ ಆಯೋಗ ಮನವಿ

ತುಮಕೂರಿನವರೆಗೆ ಮೆಟ್ರೋ ವಿಸ್ತರಣೆಯಾಗಬೇಕೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅದನ್ನು ಸಚಿವ ಸಂಪುಟದಲ್ಲಿಟ್ಟು ತೀರ್ಮಾನಿಸಲಾಗುವುದು ಎಂದರು.

Exit mobile version