ಮಂಡ್ಯ: ಒಂದು ಕಡೆ ಹನುಮ ಧ್ವಜ ಹಾರಾಟದ ವಿಚಾರಕ್ಕೆ (Hanuman Flag) ಸಂಬಂಧಿಸಿದಂತೆ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದೆ. ಮತ್ತೊಂದು ಕಡೆ ಇದೇ ವಿಚಾರವು ರಾಜಕೀಯ ತಿರುವು ಪಡೆದುಕೊಂಡಿದ್ದು, ಪರ-ವಿರೋಧಗಳು ಶುರುವಾಗಿವೆ.
ತಾಲೂಕು ಪಂಚಾಯತ್ ವಿರೋಧ ಕೆಲವರು ತಿರುಗಿ ಬಿದ್ದಿದ್ದು, ಪ್ರಾಣ ಬೇಕಾದರೂ ಬಿಟ್ಟೆವು, ಧ್ವಜ ಇಳಿಸಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು. ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಳು ನಡಿಯಿತು. ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ಪೊಲೀಸರ ಭದ್ರತೆಯೊಂದಿಗೆ ಸ್ತಂಭದಿಂದ ಹನುಮ ಧ್ವಜವನ್ನು ಇಳಿಸಿದರು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ರಸ್ತೆಯಲ್ಲೆ ಅಡುಗೆ ತಯಾರಿಸಲು ಮುಂದಾದರು. ಈ ವೇಳೆ ಅಡುಗೆ ಮಾಡುವುದನ್ನು ತಡೆದ ಪೊಲೀಸರು, ಪ್ರತಿಭಟನಾಕಾರರ ನಡುವೆ ಹಗ್ಗಜಗ್ಗಾಟ ನಡೆಯಿತು.
ಸ್ಥಳೀಯ ಯುವಕರ ದಾರಿ ತಪ್ಪಿಸಲಾಗುತ್ತಿದೆ- ಸಚಿವ ಚಲುವರಾಯಸ್ವಾಮಿ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ನಡೆಯುತ್ತಿರುವುದು ನಿಜ. ಆದರೆ ಹನುಮ ಧ್ವಜ ವಿಚಾರಕ್ಕೆ ಯಾರು ರಾಜಕಾರಣ ಬೆರಸುತ್ತಿದ್ದಾರೋ ತಿಳಿದಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬಹುದು. ಅದನ್ನು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸುವುದು ತಪ್ಪು. ನಾಳೆ ದಿನ ಡಿಸಿ ಕಚೇರಿ ಮುಂದೆ ಹಾರಿಸುತ್ತಿವಿ ಅಂದಾಗ ಅವಕಾಶ ಕೊಡಲು ಆಗುತ್ತಾ? ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ ಎಂದರು.
ಸ್ಥಳೀಯ ಯುವಕರು ಒಳ್ಳೆಯವರೇ, ಆದರೆ ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಅಗತ್ಯ ಇದ್ದರೆ ಎಲ್ಲರ ಜತೆ ಕೂತು ಮಾತನಾಡುತ್ತೇನೆ. ಮತ್ತೊಂದು ಕಡೆ ಹನುಮಾನ್ ಧ್ವಜ ಕಟ್ಟಲು ಅವಕಾಶ ಮಾಡಿಕೊಡುತ್ತೇವೆ. ನಾನು ರಾಮನ ಭಕ್ತ, ನಮ್ಮ ಮನೆ ದೇವರು ವಿಷ್ಣು, ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯ್ತಿಯಲ್ಲಿ ಇದಕ್ಕೆ ಅನುಮೋದನೆ ನೀಡಿದರೆ ತಪ್ಪಾಗುತ್ತದೆ. ಇದರಲ್ಲಿ ನಾವಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ. ಸಂವಿಧಾನ ವಿರುದ್ಧ ಆಗಿರುವುದರಿಂದ ತೆರವು ಮಾಡಲಾಗಿದೆ ಎಂದರು.
ಇದನ್ನೂ ಓದಿ: Mann Ki Baat: ರಾಮಮಂದಿರದಿಂದ ಭಾರತದಲ್ಲಿ ಏಕತೆ; ಮನ್ ಕೀ ಬಾತ್‌ನಲ್ಲಿ ಮೋದಿ ಭಾವುಕ
ಧ್ವಜ ಹಾರಾಟಕ್ಕೆ ಶಾಸಕರ ವಿರೋಧ; ಕೆ.ಎಸ್ ಈಶ್ವರಪ್ಪ ಕಿಡಿ
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದು ಯುವಕರು ಹನುಮ ಧ್ವಜವನ್ನು ಹಾರಿಸಿದ್ದಾರೆ. ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿರುವುದಕ್ಕೆ ಅಲ್ಲಿನ ಶಾಸಕರು ವಿರೋಧ ಮಾಡಿದ್ದಾರೆ. ಭಕ್ತಿಯಿಂದ ಮಾಡಿರುವ ಹನುಮ ಧ್ವಜ ತೆಗೆಯಲು ಮುಂದಾಗಿರುವುದಕ್ಕೆ ಅಲ್ಲಿನ ಜನರು, ಶಾಸಕರಿಗೆ ಹಾಗೂ ಸರ್ಕಾರಕ್ಕೆ ಇಡೀ ಶಾಪ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾವಾಗಲೂ ತಾವು ರಾಮ ಹಾಗೂ ಹನುಮನ ಭಕ್ತ, ರಾಮ, ಹನುಮ ಬಿಜೆಪಿ ಸ್ವತ್ತು ಅಲ್ಲ ಎನ್ನುತ್ತಾರೆ. ಆದರೆ ಮಂಡ್ಯದಲ್ಲಿ ನಡೆಯುತ್ತಿರುವ ಈ ಗಲಾಟೆಯಿಂದ ಯಾರು ಯಾವ ಭಕ್ತರು ಎಂಬುದು ತೋರಿಸುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಗೂಂಡಾ ವರ್ತನೆ- ಬಿ.ವೈ ವಿಜಯೇಂದ್ರ
ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಗ್ರಾ.ಪಂ ನಿರ್ಣಯ ಮಾಡಿ, ನೂರಾರು ಅಡಿ ಹನುಮನ ಧ್ವಜ ಹಾಕಿದ್ದಾರೆ. ಆದರೆ ರಾಜ್ಯ ಸರ್ಕಾರ ಗೂಂಡಾ ವರ್ತನೆ ತೋರುತ್ತಿದೆ. ದಬ್ಬಾಳಿಕೆ ಮಾಡಿ ಪೊಲೀಸರ ಮೂಲಕ ಧ್ವಜ ಇಳಿಸುವ ಕೆಲಸ ಮಾಡುತ್ತಿದೆ. ಅಧಿಕಾರದ ದರ್ಪ ಏರಿದೆ. ಸಿಎಂ, ಗೃಹ ಸಚಿವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ನಿಮ್ಮ ಸರ್ಕಾರವೇ ಮಾಡುತ್ತಿದೆ. ಗ್ರಾ.ಪಂ ನಿರ್ಣಯ ಸಹಿಸಲು ಆಗದೇ ಕಾನೂನು ಸುವ್ಯವಸ್ಥೆ ಹಾಳು ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bengaluru News : ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿ ಸತ್ತ ಶ್ವಾನ
ಏನಿದು ಹನುಮ ಧ್ವಜ ವಿವಾದ
ಅಯೋಧ್ಯೆಯಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥವಾಗಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭವನ್ನು ಗ್ರಾಮಸ್ಥರು ನಿರ್ಮಿಸಿದ್ದರು. 108 ಅಡಿ ಸ್ತಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದರು. ಧ್ವಜ ಹಾರಿಸಲು ಕೆಲವು ಷರತ್ತುಗಳನ್ನು ಗ್ರಾಮ ಪಂಚಾಯತ್ ವಿಧಿಸಿತ್ತು. ಅದರ ಪ್ರಕಾರ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಇಳಿಸಬೇಕಾಗಿತ್ತು.
ಆದರೆ, ಗ್ರಾಮಸ್ಥರು ಷರತ್ತಿನಂತೆ ಧ್ವಜ ಇಳಿಸಿರಲಿಲ್ಲ. ಬಳಿಕ ಕೆಲವರು ಧ್ವಜ ಇಳಿಸುವಂತೆ ದೂರು ನೀಡಿದ್ದರು. ತಾಲೂಕು ಆಡಳಿತದ ಸೂಚನೆಯಂತೆ ಧ್ವಜ ಇಳಿಸಲು ಮುಂದಾಗಿತ್ತು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೀಣಾ ನೇತೃತ್ವದಲ್ಲಿ ಧ್ವಜ ಇಳಿಸಲು ಮುಂದಾಗಲಾಗಿತ್ತು. ಈ ವೇಳೆ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು.
ಸರ್ಕಾರಿ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿರುವ ಕಾರಣ ತೆರವು ಮಾಡಬೇಕು ಎಂದು ತಾ.ಪಂ ಅಧಿಕಾರಿ ವೀಣಾ ಅವರು ಹಿಂದೂಪರ ಸಂಘಟನೆ ಕಾರ್ಯಕರ್ತರ ಮನವೊಲಿಸಲು ಮುಂದಾಗಿದ್ದರು. ವೀಣಾ ಅವರ ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ಹೆಚ್ಚಿಸಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಾಣ ಬೇಕಾದರೂ ಬಿಡುವೆವು. ಧ್ವಜ ಇಳಿಸಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ