ಮಂಡ್ಯ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಧ್ವಜ ತೆರವು (Flag controversy) ವಿರೋಧಿಸಿ, ಹನುಮ ಧ್ವಜ ಪುನರ್ ಪ್ರತಿಷ್ಠಾಪನೆಗೆ ಒತ್ತಾಯಿಸಿ ಫೆ. 9ಕ್ಕೆ ಹಿಂದೂಪರ ಸಂಘಟನೆಗಳು (Hanuman Flag) ಮಂಡ್ಯ ನಗರ ಬಂದ್‌ಗೆ (Mandya Bandh) ಕರೆ ನೀಡಿದ್ದವು. ಆದರೆ ಇಂದಿನ ಪ್ರತಿಭಟನೆಯು ಕೇವಲ ಬೈಕ್ ರ‍್ಯಾಲಿಗೆ ಸೀಮಿತವಾಗಿತ್ತು. ಬಿಜೆಪಿ, ಜೆಡಿಎಸ್ ಪಕ್ಷಗಳು ಮಂಡ್ಯ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಹಿಂದೆ ಸರಿದಿದ್ದವು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರೆ ಸ್ವಾಗತ ಮಾಡುತ್ತೇವೆ. ಆದರೆ ಬಲವಂತವಾಗಿ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿಸುವುದಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರು ತಿಳಿಸಿದರು.
ಇತ್ತ ಮಂಡ್ಯ ಬಂದ್‌ಗೆ ಆಟೋ ಚಾಲಕರು, ವರ್ತಕರ ಸಂಘದವರು ಬೆಂಬಲ ನೀಡಿದ್ದರು. ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಹಿಂದು ಸಂಘಟನೆಗಳು ಮನವಿ ಮಾಡಿದರು. ಹನುಮ ಧ್ವಜವನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿ ಕರೆಗೋಡು ಗ್ರಾಮದಿಂದ ಮಂಡ್ಯದವರಗೆ ಬೈಕ್ ರ‍್ಯಾಲಿ ನಡೆಸಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆಯನ್ನು ವಹಿಸಿದ್ದರು. ಮೊದಲಿಗೆ ಕೆರಗೋಡಿನಿಂದ ಬೈಕ್ ಮೂಲಕ ರ‍್ಯಾಲಿ ಹೋಗಿ ನಂತರ ಮಂಡ್ಯ ನಗರದ ರೈಲ್ವೇ ನಿಲ್ದಾಣದ ಬಳಿ ಇರುವ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಡಿಸಿ ಕಚೇರಿವರೆಗೆ ಜೈ ಶ್ರೀರಾಮ್ ಘೋಷಣೆಯೊಂದಿಗೆ ಕಾಲ್ನಡಿಗೆ ಮೂಲಕ ಮನವಿ ಸಲ್ಲಿಸಿದರು.
ಇನ್ನೂ ಕಾರ್ಯಕರ್ತರ ಒತ್ತಾಯದಂತೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಕುಮಾರ್ ಮನವಿ ಸ್ವೀಕರಿಸಿದರು. ತೆರವು ಮಾಡಿದ ಜಾಗದಲ್ಲೇ ಧ್ವಜವನ್ನು ಮರು ಹಾರಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೂ ಮನವಿಯನ್ನು ಸಲ್ಲಿಸಿದ್ದರು.
ಮಂಡ್ಯವನ್ನು ಹಿಂದುತ್ವದ ಫ್ಯಾಕ್ಟರಿ ಮಾಡ್ತಿವಿ
ಮಂಡ್ಯವನ್ನು ಹಿಂದುತ್ವದ ಫ್ಯಾಕ್ಟರಿಯನ್ನಾಗಿ ಮಾಡುತ್ತೇವೆ, ತಾಕತ್ತು ಇದ್ದರೆ ತಡೆಯಲಿ ಎಂದು ಭಜರಂಗದಳದ ಪ್ರಾತಃ ಸಂಯೋಜಕ ಮುರುಳಿ ಕೃಷ್ಣ ಸವಾಲು ಹಾಕಿದರು. ಪ್ರತಿಭಟನೆಯಲ್ಲಿ ಭಾಗಿಯಾದ ಅವರು, ನಾವು ಜಾತಿ ಹಾಗೂ ಯಾವುದೇ ಪಕ್ಷದ ಪರವಿಲ್ಲ, ಬದಲಿಗೆ ಹಿಂದು ಸಮಾಜದ ಪರವಾಗಿದ್ದೇವೆ. ಹಿಂದುತ್ವ, ಧರ್ಮದ ವಿಚಾರ ಬಂದಾಗ ಹನುಮ ಧ್ವಜವನ್ನು ದೇಶದ ಮೂಲೆ ಮೂಲೆಯಲ್ಲೂ ಹಾರಿಸುತ್ತೇವೆ. ಜಗತ್ತೆ ಹಿಂದುತ್ವವನ್ನು ಅಪ್ಪಿಕೊಂಡಿದೆ. ಆದರೆ ರಾಮನ ಹೆಸರಿರುವ ಮುಖ್ಯಮಂತ್ರಿ ಆಡಳಿತ ಮಾಡುತ್ತಿದ್ದಾರೆ. ಹೆಸರಿಗೆ ರಾಮ ಬುದ್ಧಿಯಲ್ಲಿ ರಾವಣ ಎಂದು ವ್ಯಂಗ್ಯ ಮಾಡಿದರು.
ಹಿಂದೂಗಳ ಭಾವನೆ ಜತೆ ಚೆಲ್ಲಾಟವಾಡುತ್ತಿದ್ದೀರಾ. ಮಂಡ್ಯವನ್ನು ಹಿಂದುತ್ವ ಫ್ಯಾಕ್ಟರಿಯನ್ನಾಗಿ ಮಾಡ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಮುರುಳಿ ಕೃಷ್ಣ ಸವಾಲೇಸೆದರು. ಹೋರಾಟದ ಮುಖಾಂತರವೇ ಅದೇ ಜಾಗದಲ್ಲಿ ಹನುಮ ಧ್ವಜವನ್ನು ಹಾರಿಸುತ್ತೇವೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದರೆ ಭಜರಂಗದಳ ಸುಮ್ಮನೆ ಇರುವುದಿಲ್ಲ. ಹನುಮ ಧ್ವಜ ಹಾರಿಸುವುದೇ ನಮ್ಮ ಸಂಕಲ್ಪ, ಇಲ್ಲವಾದಲ್ಲಿ ಮುಂದೆ ಮಂಡ್ಯ ಚಲೋಗೆ ಕರೆ ಕೊಡುತ್ತೇವೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತೆ. ಕಾನೂನಿಗೆ ಬೆಲೆ ಕೊಟ್ಟು ಸುಮ್ಮನೆ ಇದ್ದೇವೆ. ಇಲ್ಲವಾದಲ್ಲಿ 10 ನಿಮಿಷದಲ್ಲಿ ಧ್ವಜವನ್ನು ಹಾರಿಸುವುದು ಕಷ್ಟವಲ್ಲ ಎಂದರು.
ಲಾಠಿ ಏಟು ಮರೆಯಲ್ಲ!
ಪೊಲೀಸರ ಲಾಠಿ ಏಟು ನಮ್ಮ ಜನ ಮರೆಯಲ್ಲ. ಎಲ್ಲವನ್ನು ವಾಪಸ್ ಕೊಡುತ್ತವೆ ಎಂದು ಹಿಂದೂಪರ ಸಂಘಟನೆ ಮುಖಂಡ ಬಸವರಾಜು ಕಿಡಿಕಾರಿದರು. ಕರ್ನಾಟಕದಲ್ಲಿ ಅದೆಷ್ಟೋ ಪಾಕಿಸ್ತಾನದ ಧ್ವಜ ಹಾರಿಸಿರುವ ಉದಾಹರಣೆಗಳಿಲ್ಲವೇ?ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡುತ್ತೀರಾ? ಕೆರಗೋಡಲ್ಲಿ ಮತ್ತೆ ಧ್ವಜವನ್ನು ಹಾರಿಸಿಯೇ ತೀರುತ್ತೇವೆ ಎಂದರು.
ಶಾಸಕರ ಮನೆಗೂ ಖಾಕಿ ಕಾವಲು
ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು. ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ನಿವಾಸಕ್ಕೆ ಇಬ್ಬರು ಪಿಎಸ್‌ಐ, ಒಬ್ಬ ಎಎಸ್ಐ ಇದ್ದರು. ಈ ಹಿಂದೆ ಪಾದಯಾತ್ರೆ ವೇಳೆ ರವಿಕುಮಾರ್ ಅವರ ಫ್ಲೆಕ್ಸ್ ಹರಿದು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಶಾಸಕರ ಮನೆಗೂ ಭದ್ರತೆ ನೀಡಿದ್ದರು.
ಮಂಡ್ಯ ನಗರದಲ್ಲಿ ಬಂದ್‌ಗೆ ನಿರಾಸ
ಮಂಡ್ಯದಲ್ಲಿ ಎಂದಿನಂತೆ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದವು. ವರ್ತಕರು ನಾವು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದಿದ್ದರು. ಹೀಗಾಗಿ ಎಂದಿನಂತೆ ಬಾಗಿಲು ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದರು.
ಉಡುಪಿ, ಮಂಗಳೂರಲ್ಲಿ ಹನುಮಾನ್ ಚಾಲೀಸ್ ಪಠಣ
ಮಂಡ್ಯ ಕೆರೆಗೋಡು ಹನುಮಂತ ಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ್‌ಗೆ ಬೆಂಬಲವಾಗಿ ಉಡುಪಿಯಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡಿದರು. ವಿಶ್ವ ಹಿಂದೂ ಪರಿಷತ್ -ಬಜರಂಗದಳ ಕಾರ್ಯಕರ್ತರು ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಹನುಮಾನ್ ಚಾಲೀಸಾ ಪಠಿಸಿದರು. ಇತ್ತ ಮಂಗಳೂರು ಮಿನಿ ವಿಧಾನಸೌಧ ಬಳಿಯೂ ಹನುಮಧ್ವಜವನ್ನು ಮರಳಿ ಅದೇ ಜಾಗದಲ್ಲಿ ಮರು ಸ್ಥಾಪಿಸಲು ಆಗ್ರಹಿಸಿದರು. ಜತೆಗೆ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಧರಣಿ ಮಾಡಿದರು. ಶರಣ್ ಪಂಪ್ವೆಲ್ ಸೇರಿದಂದೆ ವಿ. ಎಚ್. ಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಜತೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಹನುಮಾನ್ ಚಾಲೀಸ್ ಪಠಿಸಿ, ನಮಗೆ ಹನುಮಧ್ವಜ ಹಾರಿಸಲು ಅವಕಾಶ ಕೊಡಬೇಕು. ಈ ಬಗ್ಗೆ ವಿರೋಧ ಮಾಡಿದರೆ ಹಿಂದೂ ದೇವಾಲಯಗಳ ಹಣ ಉಪಯೋಗಿಸಬಾರದೆಂದು ಸರ್ಕಾರಕ್ಕೆ ಭಜರಂಗದಳದ ಕಾರ್ಯಕರ್ತರು ಕಿಡಿಕಾರಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ