Site icon Vistara News

Hanuman Flag : ಕೆರಗೋಡಲ್ಲಿ ಹನುಮ ಧ್ವಜ ಕಟ್ಟಲು ಬಂದವರನ್ನು ಅಟ್ಟಾಡಿಸಿದ ಪೊಲೀಸರು!

Police lathicharge those who came to erect Hanuman flag in Keragodu

ಮಂಡ್ಯ: ಕೆರಗೋಡು ಹನುಮ (Keregodu Village) ಧ್ವಜ ತೆರವು ವಿಚಾರವು ನೋಡನೋಡುತ್ತಿದ್ದಂತೆ ಕಿಡಿಹೊತ್ತಿಕೊಂಡಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಹನುಮ ಧ್ವಜವನ್ನು (Hanuman Flag) ಕಟ್ಟಲು ಬಂದವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡು ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಹನುಮ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಪೊಲೀಸರು ಹಾರಿಸಿದ್ದಾರೆ.

ಈ ನಡುವೆ ಹನುಮ ಧ್ವಜ ಮರುಸ್ಥಾಪನೆಗೆ ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದಾರೆ. ಪೊಲೀಸರ ವ್ಯೂಹ ಭೇದಿಸಿ ಧ್ವಜಸ್ತಂಭದತ್ತ ಮುನ್ನುಗ್ಗಲು ಗ್ರಾಮಸ್ಥರು ಯತ್ನಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಖಾಕಿ ಪಡೆ ಲಾಠಿ ಚಾರ್ಜ್‌ ಮಾಡಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೊಬ್ಬನಿಗೆ ತಲೆಗೆ ಪೆಟ್ಟಾಗಿದ್ದು, ರಕ್ತಸ್ರಾವ ಉಂಟಾಗಿತ್ತು. ಮಹಿಳೆಯೊಬ್ಬರು ಏಣಿ ಹಾಕಿ ಧ್ವಜ ಕಟ್ಟಲು ಮುಂದಾದಾಗ ಅವರನ್ನು ಎಳೆದಾಡಿದರು.

ಹನುಮ ಧ್ವಜ ವಿವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 144 ಸೆಕ್ಷನ್‌ ಜಾರಿ ಮಾಡಿ ನಿಷೇಧಾಜ್ಞೆಯನ್ನು ಏರಿದ್ದಾರೆ. ಕೆರಗೋಡು ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಇತ್ತ ಜೈ ಶ್ರೀರಾಮ್‌ ಎಂದು ಘೋಷಣೆಯನ್ನು ಕೂಗಿ ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Hanuman Flag: ಹನುಮ ಧ್ವಜ ವಿವಾದ; ಶಾಸಕ ಗಣಿಗ ರವಿಕುಮಾರ್‌ ನಿವಾಸದ ಮುಂದೆ ಶ್ರೀರಾಮಸೇನೆ ಪ್ರೊಟೆಸ್ಟ್‌

ಏನಿದು ಹನುಮ ಧ್ವಜ ವಿವಾದ

ಅಯೋಧ್ಯೆಯಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥವಾಗಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ 108 ಅಡಿ ಸ್ತಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದರು. ಧ್ವಜ ಹಾರಿಸಲು ಕೆಲವು ಷರತ್ತುಗಳನ್ನು ಗ್ರಾಮ ಪಂಚಾಯತ್ ವಿಧಿಸಿತ್ತು. ಅದರ ಪ್ರಕಾರ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಇಳಿಸಬೇಕಾಗಿತ್ತು. ಆದರೆ, ಗ್ರಾಮಸ್ಥರು ಷರತ್ತಿನಂತೆ ಧ್ವಜ ಇಳಿಸಿರಲಿಲ್ಲ. ಬಳಿಕ ಕೆಲವರು ಧ್ವಜ ಇಳಿಸುವಂತೆ ದೂರು ನೀಡಿದ್ದರು. ತಾಲೂಕು ಆಡಳಿತದ ಸೂಚನೆಯಂತೆ ಧ್ವಜ ಇಳಿಸಲು ಮುಂದಾಗಿತ್ತು. ತಾಲೂಕು ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ವೀಣಾ ನೇತೃತ್ವದಲ್ಲಿ ಧ್ವಜ ಇಳಿಸಲು ಮುಂದಾಗಲಾಗಿತ್ತು. ಈ ವೇಳೆ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು.

ಸರ್ಕಾರಿ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿರುವ ಕಾರಣ ತೆರವು ಮಾಡಬೇಕು ಎಂದು ತಾ.ಪಂ ಅಧಿಕಾರಿ ವೀಣಾ ಅವರು ಹಿಂದೂಪರ ಸಂಘಟನೆ ಕಾರ್ಯಕರ್ತರ ಮನವೊಲಿಸಲು ಮುಂದಾಗಿದ್ದರು. ವೀಣಾ ಅವರ ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ಶುರುವಾಯಿತು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಾಣ ಬೇಕಾದರೂ ಬಿಡುವೆವು. ಧ್ವಜ ಇಳಿಸಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version