Site icon Vistara News

Hanuman Flag: ಹನುಮ ಧ್ವಜ ಕಿಚ್ಚು; ಕೆರಗೋಡು ಗ್ರಾಮದಲ್ಲಿ 144 ಸೆಕ್ಷನ್‌ ಜಾರಿ

Section 144 imposed in Keragodu village

ಮಂಡ್ಯ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ (Hanuman Flag) ವಿವಾದವು ಕಾವೇರುತ್ತಿದೆ. ರಾಜಕೀಯ ತಿರುವು ಪಡೆದುಕೊಂಡಿರುವ ಹನುಮ ಧ್ವಜದ ವಿವಾದಿತ ಸ್ಥಳದಲ್ಲಿ ಅಧಿಕಾರಿಗಳು ರಾಷ್ಟ್ರ ಧ್ವಜ ಹಾರಿಸಲು ಮುಂದಾದರು. ಈ ವೇಳೆ ಹಿಂದೂ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣಕ್ಕೆ ಅಡ್ಡಿಪಡಿಸಿ, ಹನುಮ ಧ್ವಜ ಹಾರಿಸಲು ಯತ್ನಿಸಿದ್ದಾರೆ. ಇದರಿಂದಾಗಿ ಪೊಲೀಸರಿಗೂ ಹಾಗೂ ಹಿಂದೂ ಕಾರ್ಯಕರ್ತರಿಗೂ ಪರಸ್ಪರ ಮಾತಿನ ಚಕಮಕಿ ನಡೆದು, ತಳ್ಳಾಟ ನೂಕಾಟ ನಡೆದಿದೆ. ಇದರ ನಡುವೆಯೂ ಪೊಲೀಸರು ಧ್ವಜ ಸ್ತಂಭಕ್ಕೆ ರಾಷ್ಟ್ರ ಧ್ವಜವನ್ನು ಕಟ್ಟಿದ್ದಾರೆ.

Section 144 imposed in Keragodu village

ಕೆರಗೋಡು ಗ್ರಾಮವು ಬೂದಿ ಮುಚ್ಚಿದ ಕೆಂಡದಂತಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣಕ್ಕೆ ಕೆರಗೋಡು ಗ್ರಾಮದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಪೊಲೀಸರು ಹಾಗೂ ಹಿಂದು ಕಾರ್ಯಕರ್ತರ ನಡುವೆ ಜಟಾಪಟಿ ಮುಂದುವರಿದಿದೆ. ಬ್ಯಾರಿಕೇಡ್‌ ತೆಗೆದು ಪೊಲೀಸರ ಮೇಲೆ ಎಸೆಯಲು ಯತ್ನಿಸಿದಾಗ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇನ್ನೂ ಧ್ವಜ ಸ್ತಂಭದ ಬಳಿ ಸುತ್ತುವರಿದು, ಹನುಮ ಧ್ವಜವನ್ನು ಕಟ್ಟಲು ಮಹಿಳೆಯರು ಮುಂದಾದರು. ಜೈ ಶ್ರೀರಾಮ್ ಘೋಷಣೆಯೊಂದಿಗೆ ಧ್ವಜಸ್ತಂಭದತ್ತ ನುಗ್ಗಲು ಯತ್ನಿಸಿದ್ದರು.

Section 144 imposed in Keragodu village

ಷರತ್ತು ಬದ್ಧ ಅನುಮತಿ ಪತ್ರ ಬಿಡುಗಡೆ ಮಾಡಿದ ಅಧಿಕಾರಿಗಳು

ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣದ ನಡುವೆಯೇ ಗ್ರಾ.ಪಂ ಅನುಮತಿ ಪತ್ರವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಗ್ರಾ.ಪಂಗೆ ಕೆರಗೋಡು ಗ್ರಾಮದ ಶ್ರೀಗೌರಿಶಂಕರ ಸೇವಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಕಳೆದ 35 ವರ್ಷಗಳಿಂದ ಸಕ್ರಿಯವಾಗಿರುವ ಈ ಟ್ರಸ್ಟ್ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್ ಸಲ್ಲಿಸಿದ್ದ ಅರ್ಜಿಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ತ್ರಿವರ್ಣ ಧ್ವಜ ಮತ್ತು ಕರ್ನಾಟಕ ಧ್ವಜ ಹಾರಿಸಲು ಮಾತ್ರ ಷರತ್ತುಬದ್ಧ ಅನುಮತಿ ನೀಡಿತ್ತು. ತ್ರಿವರ್ಣ ಧ್ವಜ ಮತ್ತು ಕರ್ನಾಟಕ ಧ್ವಜ ಹೊರತುಪಡಿಸಿ ಯಾವುದೇ ಧಾರ್ಮಿಕ/ರಾಜಕೀಯ ಪಕ್ಷದ ಬಾವುಟ ಹಾರಿಸದಂತೆ ಷರತ್ತು ವಿಧಿಸಿತ್ತು.

ಇದನ್ನೂ ಓದಿ: Hanuman Flag: ರಾಜಕೀಯ ತಿರುವು ಪಡೆದ ಕೆರಗೋಡು ಹನುಮ ಧ್ವಜ; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು

ಏನಿದು ಹನುಮ ಧ್ವಜ ವಿವಾದ

ಅಯೋಧ್ಯೆಯಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥವಾಗಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭವನ್ನು ಗ್ರಾಮಸ್ಥರು ನಿರ್ಮಿಸಿದ್ದರು. 108 ಅಡಿ ಸ್ತಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದರು. ಧ್ವಜ ಹಾರಿಸಲು ಕೆಲವು ಷರತ್ತುಗಳನ್ನು ಗ್ರಾಮ ಪಂಚಾಯತ್ ವಿಧಿಸಿತ್ತು. ಅದರ ಪ್ರಕಾರ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಇಳಿಸಬೇಕಾಗಿತ್ತು.

ಆದರೆ, ಗ್ರಾಮಸ್ಥರು ಷರತ್ತಿನಂತೆ ಧ್ವಜ ಇಳಿಸಿರಲಿಲ್ಲ. ಬಳಿಕ ಕೆಲವರು ಧ್ವಜ ಇಳಿಸುವಂತೆ ದೂರು ನೀಡಿದ್ದರು. ತಾಲೂಕು ಆಡಳಿತದ ಸೂಚನೆಯಂತೆ ಧ್ವಜ ಇಳಿಸಲು ಮುಂದಾಗಿತ್ತು. ತಾಲೂಕು ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ವೀಣಾ ನೇತೃತ್ವದಲ್ಲಿ ಧ್ವಜ ಇಳಿಸಲು ಮುಂದಾಗಲಾಗಿತ್ತು. ಈ ವೇಳೆ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು.

ಸರ್ಕಾರಿ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿರುವ ಕಾರಣ ತೆರವು ಮಾಡಬೇಕು ಎಂದು ತಾ.ಪಂ ಅಧಿಕಾರಿ ವೀಣಾ ಅವರು ಹಿಂದೂಪರ ಸಂಘಟನೆ ಕಾರ್ಯಕರ್ತರ ಮನವೊಲಿಸಲು ಮುಂದಾಗಿದ್ದರು. ವೀಣಾ ಅವರ ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ಹೆಚ್ಚಿಸಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಾಣ ಬೇಕಾದರೂ ಬಿಡುವೆವು. ಧ್ವಜ ಇಳಿಸಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version