Site icon Vistara News

Hanuman Flag : ಕೆರಗೋಡಿನಲ್ಲಿ ನಡೆದದ್ದು ಊರಿಗೆ ಬೆಂಕಿ ಹಚ್ಚುವ ಕೆಲಸ ಎಂದ ಶಾಸಕ ಗಣಿಗ ರವಿ

Hanuman Flag Ganiga Ravi kumar

ಮಂಡ್ಯ: ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಅಂತ ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ.: ಇದು ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ನಡೆಯುತ್ತಿರುವ ಹನುಮ ಧ್ವಜ (Hanuman Flag) ದಂಗಲ್‌ಗೆ ಸಂಬಂಧಿಸಿ ಮಂಡ್ಯ ಶಾಸಕ ಗಣಿಗ ರವಿಕುಮಾರ್ (Mandya MLA Ganiga Ravi kumar) ಹೇಳಿಕೆ.

ಕೆರಗೋಡು ಹನುಮ ಧ್ವಜ (Keragodu Hanuma Dhwaja) ವಿವಾದದ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ನಡೆಸಿದ ಪಾದಯಾತ್ರೆ ವೇಳೆ ಸೋಮವಾರ ಗಣಿಗ ರವಿ ಕುಮಾರ್‌ ಅವರ ಫ್ಲೆಕ್ಸ್‌ಗಳ ಮೇಲೆ ಆಕ್ರಮಣ ಮಾಡಲಾಗಿತ್ತು. ಮಂಡ್ಯದಲ್ಲೂ ಅವರ ಫ್ಲೆಕ್ಸ್‌ಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ʻʻಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಿದರೂ ಈ ರೀತಿಯ ವಿರೋಧ ಆಗುತ್ತೆ ಅಂದ್ರೆ ಏನು.? ನಾನು ಕೆರಗೋಡು ಗ್ರಾಮದ ಬಸ್ ಸ್ಟ್ಯಾಂಡ್‌ ಜಾಗ ನೋಡಲು ಹೋದಾಗ ಆ ಸ್ಥಳ ನೋಡಿದ್ದೆ. ಹನುಮ ದೇವಾಲಯದ ಎದುರು ಆ ಧ್ವಜಸ್ತಂಭ ಇದೆ. ಇಲ್ಲಿ ಬಸ್ ನಿಲ್ದಾಣ ಆಗುತ್ತೆ ನಾನು ಅ ಜಾಗದಲ್ಲಿ ಸ್ತಂಭ ಬೇಡ ಅಂತ ಹೇಳಿದ್ದೆ. ಇದಾದ ಬಳಿಕವೂ ಗೌರಿಶಂಕರ ಟ್ರಸ್ಟ್ ನವರು ಧ್ವಜಸ್ತಂಭ ನಿರ್ಮಾಣಕ್ಕೆ ಅರ್ಜಿ ಕೊಟ್ರು. 16ನೇ ತಾರೀಖು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಕ್ಕೆ ಅನುಮತಿ ತಕೊಂಡಿದ್ದಾರೆ. 20ನೇ ತಾರೀಖು ಇವರು ಮತ್ತೊಂದು ಕಾರ್ಡ್ ಪ್ಲೇ ಮಾಡಿದರು. ಹನುಮ ಧ್ವಜ ಹಾಕಿಕೊಳ್ತೇವೆ ಅಂತ ಕೇಳಿ 23ನೇ ತಾರೀಖು ಇಳಿಸೋದಾಗಿ ಅನುಮತಿ ಪಡೆದರು. ಆದರೆ ಅದನ್ನ ಇಳಿಸದೇ ಉದ್ಧಟತನ ಮಾಡಿದ್ದಾರೆʼʼ ಎಂದು ಗಣಿಗ ರವಿಕುಮಾರ್‌ ಅವರು ಹೇಳಿದರು.

ಇದನ್ನೂ ಓದಿ : Hanuman Flag : ಮಂಡ್ಯದಲ್ಲಿ ಹಿಂಸಾತಾಂಡವ; ಜನಾಕ್ರೋಶಕ್ಕೆ ಗುರಿಯಾದ ಕಾಂಗ್ರೆಸ್‌ ಶಾಸಕ ರವಿ ಗಣಿಗ

ʻʻಆ ಜಾಗದಲ್ಲಿ ಡಿಎಸ್ಎಸ್ ನವರು ಬಂದು ಅಲ್ಲಿ ಅಂಬೇಡ್ಕರ್ ಬಾವುಟ ಹಾಕ್ತೀವಿ ಅಂದರು. ಅದಾದ ಬಳಿಕ ಒಕ್ಕಲಿಗರು ಬಂದು ಕೆಂಪೇಗೌಡರ ಬಾವುಟ ಹಾಕ್ತೀವಿ ಅಂದರು. ಕುರುಬ ಸಂಘಟನೆ ಅವ್ರು ಬಂದು ರಾಯಣ್ಣನ ಬಾವುಟ ಹಾಕ್ತೀವಿ ಅಂದರು. ಹಾಗಾಗಿ ಎಲ್ಲರಿಗೂ ಅವಕಾಶ ಕೊಡಲು ಆಗುತ್ತಾ.? ಇದಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿ ಹನುಮಾನ್ ಧ್ವಜ ತೆರವು ಮಾಡಿದ್ದಾರೆ. ಆದರೆ ಕೆಲವರು ಕ್ರಿಮಿನಲ್ ಮೈಂಡ್‌ನವರು ಇದನ್ನು ರಾಜಕೀಯಕ್ಕೆ ಬಳಸಿಕೊಂಡರು. ಇದಕ್ಕೆ ಬೆಂಕಿ ಹಚ್ಚಿ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆʼʼ ಎಂದು ಗಣಿಗ ರವಿ ಕುಮಾರ್‌ ಹೇಳಿದರು.

ʻʻಹನುಮ ಧ್ಚಜ ಹಾಕಿದ್ದನ್ನು ಪ್ರಶ್ನಿಸಿ ಕೆಲವು ದಲಿತ ಮುಖಂಡರು ಡಿಸಿ ಬಳಿ ದೂರು ನೀಡಿದರು. ಹಾಗಾಗಿ ಇದನ್ನ ಜಿಲ್ಲಾಧಿಕಾರಿ ತೆರವಿಗೆ ಅದೇಶ ಮಾಡಿದ್ದಾರೆ. ಅದಕ್ಕಾಗಿ ಪೊಲೀಸರ ಸಮ್ಮುಖದಲ್ಲಿ ಹನುಮಧ್ವಜ ಇಳಿಸಿ ತ್ರಿವರ್ಣ ಧ್ಚಜ ಹಾರಿಸಲಾಗಿದೆʼʼ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಹೇಳಿದರು.

ʻʻಹೊರಗಿನಿಂದ ಗಲಭೆಕೋರರನ್ನು ಕರೆಸಿ ಗಲಾಟೆ ಮಾಡಲಾಗಿದೆ. ನಮ್ಮ ಕೆರಗೋಡು ಜನಕ್ಕೆ ಆ ಘೋಷಣೆ ಕೂಗೋದಕ್ಕೆ ಬರಲ್ಲ. ಆದರೆ ಹೊರಗಿನವರನ್ನ ಕರೆತಂದು ಗಲಾಟೆ ಮಾಡಿ, ಕಲ್ಲು ಹೊಡೆಸಿದ್ದಾರೆ. ನಮ್ಮ ಫ್ಲೆಕ್ಸ್ ಗಳನ್ನ ಕಿತ್ತುಹಾಕಿಸಿ ಗಲಾಟೆ ಮಾಡಿಸಿದ್ದಾರೆ. ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ನಮ್ಮ ವಿರುದ್ಧ ಪ್ರತಿಭಟನೆ ಮಾಡ್ತಾರೆ ಅಂದ್ರೆ ಏನು.? ಜೆಡಿಎಸ್ ನ ರಾಮಚಂದ್ರು, ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಹಾಗೂ ಸ್ಥಳೀಯ ಪುಡಾರಿಗಳು ಇಲ್ಲಿ ಗಲಭೆ ಸೃಷ್ಟಿಸಿದ್ದಾರೆʼʼ ಎಂದು ಹೇಳಿದರು ಗಣಿಗ ರವಿಕುಮಾರ್‌.

ಈ ಘಟನಾವಳಿಗಳಲ್ಲಿ ಸ್ಥಳೀಯ ಪಿಡಿಓ ಅವರ ತಪ್ಪೂ ಇದೆ. ಅವರನ್ನ ಅಮಾನತ್ತು ಮಾಡುವಂತೆ ಹೇಳಿದ್ದೇನೆ. ಹನುಮಧ್ವಜ ಹಾರಿಸಲು ಅನುಮತಿ ಕೊಡೊಕೆ ಅವರಿಗೆ ಅಧಿಕಾರ ಇಲ್ಲ. ಆದರೂ ಆ ಪಿಡಿಓನ ಬೆದರಿಸಿ ಅನುಮತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ ಎಂದು ರವಿ ಕುಮಾರ್‌ ನುಡಿದರು.

Exit mobile version