ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು (Keragodu) ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದ್ದ ಹನುಮಧ್ವಜ (Hanuman Flag) ಪುನರ್ ಪ್ರತಿಷ್ಠಾಪನೆಗೆ ಒತ್ತಾಯಿಸಿ ಇಂದು ಹಿಂದೂಪರ ಸಂಘಟನೆಗಳಿಂದ ಕೆರಗೋಡು ಹಾಗೂ ಮಂಡ್ಯ ನಗರ ಬಂದ್‌ಗೆ (mandya bandh) ಕರೆ ನೀಡಲಾಗಿದೆ.
ಆದರೆ ಈ ಬಂದ್‌ಗೆ ಆಟೋ ಚಾಲಕರು, ವರ್ತಕರ ಸಂಘ ಬೆಂಬಲ ನೀಡಿಲ್ಲ. ಹಾಗೆಯೇ ಬಿಜೆಪಿ, ಜೆಡಿಎಸ್ ಪಕ್ಷಗಳಿಂದಲೂ ಬೆಂಬಲ ನೀಡಲಾಗಿಲ್ಲ. ಸಾವರ್ಜನಿಕ ಹಿತ ದೃಷ್ಟಿಯಿಂದ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದಿಲ್ಲ. ಆದರೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದರೆ ಸ್ವಾಗತ ಮಾಡ್ತೀವಿ ಎಂದು ಬಿಜೆಪಿ ಹೇಳಿದೆ.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಕೆರಗೋಡಿನಿಂದ ಮಂಡ್ಯದ ವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಕೆರಗೋಡಿನಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದ್ದು, ಜಿಲ್ಲಾಧಿಕಾರಿಗಳಿಗೆ ಕಾರ್ಯಕರ್ತರು ಮನವಿ ಸಲ್ಲಿಸಲಿದ್ದಾರೆ.
ಹನುಮಧ್ವಜ ಪ್ರಕರಣ ಖಂಡಿಸಿ ಫೆ.7ರಂದು ಸಮಾನ ಮನಸ್ಕರ ವೇದಿಕೆ ಬಂದ್ ಕರೆ ನೀಡಿತ್ತು. ಅದನ್ನು ಕೈ ಬಿಡುವಂತೆ ಜಿಲ್ಲಾಡಳಿತ ಮಾಡಿಕೊಂಡ ಮನವಿಗೆ ಸ್ಪಂದಿಸಿ ಬಂದ್ ಕರೆಯನ್ನು ಕೈ ಬಿಟ್ಟಿತ್ತು.
ಹಿಂದು ಪರ ಸಂಘಟನೆಗಳಿಂದ ಬೈಕ್ ರ್ಯಾಲಿ ಹಿನ್ನಲೆಯಲ್ಲಿ ಕೆರಗೋಡುವಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಭದ್ರತೆಗಾಗಿ ಇಬ್ಬರು ಇನ್‌ಸ್ಪೆಕ್ಟರ್, 5 ಜನ ಸಬ್ ಇನ್‌ಸ್ಪೆಕ್ಟರ್, 100ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ 1 ksrp ತುಕಡಿ ನಿಯೋಜನೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥವಾಗಿ ಈ ಧ್ವಜಸ್ತಂಭವನ್ನು ಗ್ರಾಮಸ್ಥರು ನಿರ್ಮಿಸಿದ್ದರು. ಆದರೆ ಈ ಧ್ವಜದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜ ಮಾತ್ರ ಹಾರಿಸಲು ಅವಕಾಶವಿತ್ತು. 108 ಅಡಿ ಸ್ತಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದರು.
ಧ್ವಜ ಹಾರಿಸಲು ಕೆಲವು ಷರತ್ತುಗಳನ್ನು ಗ್ರಾಮ ಪಂಚಾಯತ್ ವಿಧಿಸಿತ್ತು. ಅದರ ಪ್ರಕಾರ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಇಳಿಸಬೇಕಾಗಿತ್ತು. ಆದರೆ, ಗ್ರಾಮಸ್ಥರು ಷರತ್ತಿನಂತೆ ಧ್ವಜ ಇಳಿಸಿರಲಿಲ್ಲ. ಬಳಿಕ ಕೆಲವರು ಧ್ವಜ ಇಳಿಸುವಂತೆ ದೂರು ನೀಡಿದ್ದರು. ತಾಲೂಕು ಆಡಳಿತದ ಸೂಚನೆಯಂತೆ ಧ್ವಜ ಇಳಿಸಲು ಮುಂದಾಗಿತ್ತು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೀಣಾ ನೇತೃತ್ವದಲ್ಲಿ ಧ್ವಜ ಇಳಿಸಲು ಮುಂದಾಗಲಾಗಿತ್ತು. ಈ ವೇಳೆ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು.
ಇದನ್ನೂ ಓದಿ: Hanuman Flag : ಕೆರಗೋಡು ಧ್ವಜ ವಿವಾದದಿಂದ ಜೆಡಿಎಸ್ ಔಟ್, ನಾಳೆ ಮಂಡ್ಯ ಬಂದ್ ಡೌಟ್