Site icon Vistara News

CM Siddaramaiah : ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

CM siddaramiah in Madya Programme

ಮಂಡ್ಯ: ಕಾಗೆ ಚರ್ಚೆಗಳಿಂದ (Crow debate), ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಂದ (superstition program) ಜನರಿಗೆ ಏನು ಪ್ರಯೋಜನ? ಅದರ ಬದಲು ನನ್ನ ಸರ್ಕಾರದ ತಪ್ಪುಗಳಿದ್ದರೆ ಅದನ್ನು ನೀವು ಬರೆಯಿರಿ, ತೋರಿಸಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪತ್ರಕರ್ತರಿಗೆ ಸಲಹೆ ನೀಡಿದರು.

ಶ್ರೀಕ್ಷೇತ್ರ ಆದಿಚುಂಚನಗಿರಿ ಮಠ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾರಿನ ಮೇಲೆ ಕಾಗೆ ಕುಳಿತರೆ ಅದರಿಂದ ರಾಜ್ಯದ ಜನತೆಗೆ ಏನಾಗಬೇಕು ? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನಲ್‌ಗಳಲ್ಲಿ ಚರ್ಚೆ ನಡೆಸಿದರು. ಜ್ಯೋತಿಷಿಗಳು ನಾನು ಅಧಿಕಾರ ಕಳ್ಕೊತೀನಿ ಅಂದ್ರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳ್ಕೊತೀನಿ ಅಂತಾನೂ ಜ್ಯೋತಿಷಿಗಳು ಹೇಳಿದರು. ಆದರೆ, ನಾನು ಅಧಿಕಾರ ಪೂರ್ಣಗೊಳಿಸಿ ಮತ್ತೆ ಎರಡನೇ ಬಾರಿ ಸಿಎಂ ಆದೆ. ಕಾಗೆ ಕೂತಾಗ ಮಾತಾಡಿದ್ದ ಜ್ಯೋತಿಷಿಗಳ ಮಾತಿಗೆ ಏನು ಬೆಲೆ ಬಂತು? ಇಂಥಾ ಮೌಢ್ಯದ ಸುದ್ದಿ ಮತ್ತು ಚರ್ಚೆಗಳನ್ನು ಚಾನಲ್‌ಗಳು ಮಾಡಬಾರದು ಎಂದರು.

ವಸ್ತು ಸ್ಥಿತಿಯನ್ನು ಜನರಿಗೆ ತಲುಪಿಸಿ. ಊಹೆ ಮಾಡಿಕೊಂಡು, ಕಲ್ಪಿಸಿಕೊಂಡು ಸುದ್ದಿ ಬರೆದು ಹಾಸ್ಯಾಸ್ಪದರಾಗಬೇಡಿ. ತಿರುಚಿ ಸುದ್ದಿ ಮಾಡುವುದನ್ನು ಬಿಡಿ. ನನ್ನ ಮಾತುಗಳ ಸಾಂದರ್ಭಿಕತೆಯನ್ನೇ ಮರೆ ಮಾಚಿ ಸುದ್ದಿ ಮಾಡ್ತಾರೆ. ಇದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪ್ರಾಮಾಣಿಕವಾಗಿ ಜನರಿಗೆ ಸುದ್ದಿ ತಲುಪಿಸಿ

ನನ್ನ ಸರ್ಕಾರದ ತಪ್ಪುಗಳಿದ್ದರೆ ಮುಲಾಜಿಲ್ಲದೆ ಬರೆಯಿರಿ. ಸರ್ಕಾರ ಕೊಟ್ಟ ಮಾತು ತಪ್ಪಿದೆಯಾ, ಜನಪರವಾಗಿ ಕೆಲಸ ಮಾಡ್ತಾ ಇದೆಯೋ ಇಲ್ಲವೋ ಎನ್ನುವುದನ್ನೂ ಪ್ರಾಮಾಣಿಕಕವಾಗಿ ಜನರಿಗೆ ತಲುಪಿಸಿ ಎಂದು ಸಿಎಂ ಸಿದ್ದರಾಂಯ್ಯ ಕರೆ ನೀಡಿದರು.

ನನ್ನ ಬಗ್ಗೆ ಸುಳ್ಳು ಬರೆದಾಗ, ಸತ್ಯ ತಿರುಚಿ ಸುದ್ದಿ ಪ್ರಸಾರ ಮಾಡಿದಾಗ ನಾನು ಯಾವತ್ತೂ ಯಾವ ಮಾಧ್ಯಮದವರಿಗೂ ಯಾಕೆ ಸುಳ್ಳು ಹೇಳ್ತೀರಾ ಎಂದು ಕರೆ ಮಾಡಿ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಅದನ್ನೂ ಜನರಿಗೆ ತಲುಪಿಸಿ. ನಿಮಗೆ ವಾಕ್ ಸ್ವಾತಂತ್ರ್ಯ ಇದೆ. ಅದನ್ನು ಘನತೆಯಿಂದ ಬಳಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: CM Siddaramaiah : ಮೋದಿ ಸರ್ಕಾರದಿಂದ ಕರ್ನಾಟಕದ ವಿರುದ್ಧ ನಿರಂತರ ದ್ವೇಷ; ಶೇಖಾವತ್‌ಗೆ ಸಿದ್ದರಾಮಯ್ಯ ತಿರುಗೇಟು

ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದ ಮಹಾ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಚಲಯವರಾಯಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕರಾದ ರವಿ ಗಣಿಗ, ದಿನೇಶ್ ಗೂಳಿಗೌಡ, ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರ ಸ್ವಾಮಿ ಹಾಗೂ ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version