ಮಂಡ್ಯ: ದಕ್ಷಿಣ ಪದವೀಧರರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ವಿಜಯ ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್.ಕೆ.ರಾಮು ಪರವಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರಾದ್ಯಂತ ಮತಯಾಚನೆ ನಡೆಸಿದ ಪುಟ್ಟರಾಜು, ತಮ್ಮ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಎಂಬ ಅಗ್ನಿಪರೀಕ್ಷೆಯಲ್ಲಿ ಜೆಡಿಎಸ್ ಜಯಶಾಲಿಯಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷದ ವಿರುದ್ಧ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಷಡ್ಯಂತ್ರ ನಡೆಸುತ್ತಿವೆ. ಅದ್ಯಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ. ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು.
ದಕ್ಷಿಣ ಪದವೀಧರ ಕ್ಷೇತ್ರವು ಜೆಡಿಎಸ್ ತೆಕ್ಕೆಯಲ್ಲಿದೆ. ಹಾಲಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರು ವೈಯಕ್ತಿಕ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಎಚ್.ಕೆ. ರಾಮು ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಜೆಡಿಎಸ್ ಕಣಕ್ಕಿಳಿಸಿದೆ ಎಂದು ಪುಟ್ಟರಾಜು ಹೇಳಿದರು.
ರಾಮು ಆಯ್ಕೆ ವಿಚಾರದಲ್ಲಿ ಅನಗತ್ಯ ಗೊಂದಲ ಮೂಡಿಸುವುದು ಸರಿಯಲ್ಲ. ಚುನಾವಣೆ ಎಂದ ಮೇಲೆ ಇಂಥದ್ದೆಲ್ಲಾ ಸರ್ವೇ ಸಾಮಾನ್ಯ. ಒಬ್ಬಿಬ್ಬರು ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಮತದಾರರು ಗೊಂದಲಕ್ಕೆ ಸಿಲುಕುವುದಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದರು.
ಪಾಂಡವಪುರ ತಾಲೂಕು ಆಡಳಿತ, ಸೆಸ್ಕ್ ಕಚೇರಿ, ಬಿಜಿಎಸ್, ಬಡ್ಸ್ ಶಾಲೆ, ಸರ್ಕಾರಿ ಶಾಲೆ, ಬಿಇಒ ಕಚೇರಿ, ಬಾಲಕಿಯರ ಕಾಲೇಜು ಸೇರಿ ಪಾಂಡವಪುರ ಪಟ್ಟಣದ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪುಟ್ಟರಾಜು ಮತಯಾಚನೆ ನಡೆಸಿದರು. ಪುಟ್ಟರಾಜು ಅವರ ಮತಯಾಚನೆ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅರ್ಚನಾ, ಉಪಾಧ್ಯಕ್ಷೆ ಶ್ವೇತಾ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ. ಶ್ರೀನಿವಾಸ್, ನಿರ್ದೇಶಕ ಕಣಿವೆ ಯೋಗೇಶ್, ಜೆಡಿಎಸ್ ಮುಖಂಡ ಮಹೇಶ್ ಮತ್ತಿತರರಿದ್ದರು.
ಇದನ್ನೂ ಓದಿ: ಸಚಿವ ನಾರಾಯಣಗೌಡ ಪೊಲಿಟಿಕಲ್ ಬೆಗ್ಗರ್: ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್