ಮಂಡ್ಯ: ನಟ ದರ್ಶನ್ (Actor Darshan) ಎಲ್ಲಿದ್ದರೂ ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಇರ್ತಾರೆ. ಅವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬೇಡಿ (Dont Blame Actor Darshan) ಎಂದು ನಿರ್ದೇಶಕ, ನಟ ಜೋಗಿ ಪ್ರೇಮ್ (Director Jogi Prem) ಮನವಿ ಮಾಡಿದರು. ಅವರು ಶುಕ್ರವಾರ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಂಡ್ಯ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ರೈತರ ಧರಣಿಯಲ್ಲಿ (Mandya Protest) ಪಾಲ್ಗೊಂಡ ಬಳಿಕ ಮಾತನಾಡಿದರು. ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆ ವರೆಗೆ ಕಾಲ್ನಡಿಗೆಯಲ್ಲಿ ಬಂದು ಬೆಂಬಲ ನೀಡಿದರು ಜೋಗಿ ಪ್ರೇಮ್.
ʻʻಕಾವೇರಿ ಹೋರಾಟ ಅಂದ್ರೆ ದರ್ಶನ್ ಅವರು ಸದಾ ಮುಂದೆ. ಅದರಲ್ಲೂ ಮಂಡ್ಯ ವಿಷಯ ಅಂದ್ರೆ ನಮ್ಮೆಲ್ಲರಿಗೂ ಹೋರಾಟ ಮಾಡಲು ಹೇಳುವ ವ್ಯಕ್ತಿ. ಒಳ್ಳೆಯ ಗುಣ ಇರುವ ವ್ಯಕ್ತಿ ದರ್ಶನ್. ಅವರ ಬಗ್ಗೆ ಯಾರು ಸಹ ಕೆಟ್ಟದಾಗಿ ಮಾತನಾಡಬೇಡಿ. ದರ್ಶನ್ ಅವರ ಬಗ್ಗೆ ಯಾರು ಸುಮ್ಮನೆ ಮಾತನಾಡಬಾರದು” ಎಂದು ಮನವಿ ಮಾಡಿಕೊಂಡರು.
ಮಂಡ್ಯದವರಾಗಿ ನಟ ದರ್ಶನ್ ಯಾಕೆ ಕಾವೇರಿ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದೂ ಸೇರಿದಂತೆ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ದರ್ಶನ್ ಅವರು ಖಾರವಾದ ಪ್ರತಿಕ್ರಿಯೆ ನೀಡಿದ್ದರು. ನೀವು ನಮ್ಮನ್ನು ಮಾತ್ರ ಕೇಳ್ತೀರಿ. ತಮಿಳು ಸಿನಿಮಾ ನೋಡ್ತೀರಿ, ಅದಕ್ಕೆ ಕೋಟಿಗಟ್ಟಲೆ ದುಡ್ಡು ಬರೋ ಹಾಗೆ ಮಾಡ್ತೀರಿ, ಅದರಿಂದ ದುಡ್ಡು ಮಾಡಿಕೊಂಡವರನ್ನು ಬನ್ನಿ ಅಂತ ಯಾಕೆ ಹೇಳೊಲ್ಲ ಎಂದು ಕೇಳಿದ್ದರು. ದರ್ಶನ್ ಅವರ ಈ ಆಕ್ರೋಶದ ಪ್ರತಿಕ್ರಿಯೆ ಕೂಡಾ ಸದ್ದು ಮಾಡಿತ್ತು. ದರ್ಶನ್ ಹೋರಾಟಗಾರರ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂದು ದರ್ಶನ್ ಪರ ಜೋಗಿ ಪ್ರೇಮ್ ಮಾತನಾಡಿದ್ದಾರೆ.
ನಾನು ಇದೇ ಊರಿನವನು, ರೈತನ ಮಗ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯವರಾಗಿರುವ ಜೋಗಿ ಪ್ರೇಮ್ ತಮ್ಮ ಊರಿನ ಪ್ರೇಮವನ್ನು ಮೆರೆಯುತ್ತಾ ಮಾತನಾಡಿದರು.
ʻʻನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಈವಾಗಲೂ ಎಮ್ಮೆ,, ದನ ಸಾಕುತ್ತಿದ್ದೇನೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ.
ಕುಡಿಯುವ ನೀರಿಗಾಗಿ ಹೋರಾಟ ಮಾಡ್ತಾರೆ. ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡ್ತಾರೆʼʼ ಎಂದು ಹೇಳಿದರು.
ಇದನ್ನೂ ಓದಿ: Actor Darshan : ನಾವಷ್ಟೇ ಕಾಣ್ಸೋದಾ? ಹೇಳಿಕೆಯಿಂದ ರೈತರ ಕೆಂಗಣ್ಣಿಗೆ ಗುರಿಯಾದ ನಟ ದರ್ಶನ್; ಕ್ಷಮೆ ಯಾಚನೆಗೆ ಆಗ್ರಹ
ಆದರೆ, ಕಾವೇರಿ ಹೆಸರಿನಲ್ಲಿ ರಾಜಕಾರಣ ಮಾಡಿ ವೋಟ್ ಪಡೆದು ರೈತರ ಕತ್ತು ಕುಯ್ಯುವ ಕೆಲಸ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಡಿದರು ಜೋಗಿ ಪ್ರೇಮ್. ರಾಜಕೀಯ ಅವರು ಮಾಡ್ತಾರೆ, ಇವರು ಮಾಡ್ತಾರೆ ಅಂತಲ್ಲ, ಯಾವುದೇ ಪಕ್ಷ ಯಾರೇ ಸಿಎಂ ಆದ್ರೂ ರಾಜಕಾರಣ ಮಾಡ್ತಾರೆ. ಬಂಗಾರಪ್ಪ ಅವರು ಇರುವಾಗ ನೀರು ಬಿಟ್ಟಿಲ್ಲ. ಇವರು ಕೂಡಾ ಬಿಡಬಾರದಿತ್ತು ಎಂದರು. ಆದರೆ, ಎಂಪಿ ಚುನಾವಣೆ ಬರ್ತಿರೋದರಿಂದ ರಾಜಕೀಯ ನಡೀತಿದೆ ಎಂದರು.
ʻʻಮಂಡ್ಯ ಜನರನ್ನು ಹೊಗಳಿ, ಬೆಂಬಲ ಕೊಡ್ತೀವಿ ಎಂದು ಹೇಳಿ ವೋಟ್ ಪಡೆದು ಕತ್ತು ಕೊಯ್ಯುವ ಕೆಲಸ ಮಾಡ್ತಾರೆ. ಈ ರಾಜಕೀಯ ಬಿಡಿ, ತಕ್ಷಣವೇ ನೀರು ನಿಲ್ಲಿಸಿ ರೈತರನ್ನು ಉಳಿಸಿʼʼ ಎಂದು ಆಗ್ರಹ ಮಂಡಿಸಿದರು.