ಮಂಡ್ಯ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ (Water crisis) ಎದುರಾಗಿದೆ. ಇಂತಹ ಭೀಕರ ಬರದಲ್ಲೂ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಈ ಆರೋಪವನ್ನು ಕಾವೇರಿ ನಿಗಮವು (KRS Dam) ತಳ್ಳಿ ಹಾಕಿದೆ. ನೀರು ತಮಿಳುನಾಡಿಗೆ ಅಲ್ಲ ಬದಲಾಗಿ ಬೆಂಗಳೂರಿಗೆ ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿವೆ. ಆದರೆ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಸುಮಾರು 4,579 ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಮಂಡ್ಯದ ಸಂಜಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದವು.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದ ವಿವಿ ಪ್ರತಿಮೆ ಬಳಿ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಸಂಕಷ್ಟದಲ್ಲಿಯೂ ನದಿಗೆ ನೀರು ಹರಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಜನ- ಜಾನುವಾರುಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ನಮ್ಮ ನೀರು ರಕ್ಷಸೋಣ ಎಂಬ ಸ್ಲೋಗನ್ ಹಿಡಿದು ಹಳೆ ಬೆ-ಮೈ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶಿಸಿದರು. ಈ ಕೂಡಲೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರು. ರಸ್ತೆ ತಡೆಯಿಂದಾಗಿ ಹಳೆ ಬೆ-ಮೈ ಹೆದ್ದಾರಿಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: Water Scarcity : ನಮ್ಮ ಮನೆಯಲ್ಲೂ ನೀರಿಲ್ಲ; ಜಲಕ್ಷಾಮದ ಭೀಕರತೆ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್
ತಮಿಳುನಾಡಿಗಲ್ಲ ಬೆಂಗಳೂರಿಗೆ ನೀರು ಬಿಡುಗಡೆ
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿಲ್ಲ. ಬದಲಾಗಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎನ್ನಲಾಗಿದೆ. ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಲಾಗಿದೆ. ಮಳವಳ್ಳಿ ತಾಲೂಕಿನ ಶಿವನಕಟ್ಟೆ ಬಳಿ ನೀರು ಬತ್ತಿದೆ, ಬೆಂಗಳೂರಿಗೆ ಶಿವಕಟ್ಟೆಯಿಂದ ನೀರು ಪೂರೈಕೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಕುಡಿಯುವ ಉದ್ದೇಶಕ್ಕೆ ನೀರು ಬಿಡಲಾಗಿದೆ. ಕಟ್ಟೆಗೆ ನೀರು ತುಂಬಿಸಲು ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರು ಹರಿಸೋದನ್ನು ನಿಲ್ಲಿಸಿದೆ.
ಮೈಸೂರು-ಮಂಡ್ಯಕ್ಕೆ ತಿಂಗಳಿಗೆ ಬೇಕು 2 ಟಿಎಂಸಿ ನೀರು
ಕೆ.ಆರ್.ಸಾಗರ ಅಣೆಕಟ್ಟೆಯ ನೀರಿನ ಮಟ್ಟ: 88.56 ಅಡಿಗಳಿದ್ದು, ಗರಿಷ್ಠ ಮಟ್ಟ : 124.80 ಅಡಿಗಳು, ಒಳಹರಿವು : 132 ಕ್ಯೂಸೆಕ್ ಇದ್ದರೆ, ಹೊರಹರಿವು : 4579 ಕ್ಯೂಸೆಕ್ ಇದೆ. ಸಂಗ್ರಹ: 15.098 ಟಿಎಂಸಿ ನೀರು ಸಂಗ್ರಹವಾಗಿದೆ. ಈ 15 ಟಿಎಂಸಿಯಲ್ಲಿ 5 ರಿಂದ 6 ಟಿಎಂಸಿ ಡೆಡ್ ಸ್ಟೊರೇಜ್ ಆಗಿದ್ದು, 10 ಟಿಎಂಸಿ ನೀರು ಉಳಿಯಲಿದೆ. ಈ ಹತ್ತು ಟಿಎಂಸಿ ನೀರಿನ ಪೈಕಿ ಮೈಸೂರು, ಮಂಡ್ಯ ನಗರಗಳಿಗೆ ತಿಂಗಳಿಗೆ 2 ಟಿಎಂಸಿ ನೀರು ಬೇಕು. ಈ ಬೇಸಿಗೆವರೆಗೂ ಕುಡಿಯಲು ನೀರಿಗೆ ಸಾಕಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ