ಮಂಡ್ಯ: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ತುಸು ಹೆಚ್ಚಾಗಿಯೇ ಮಳೆಯಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಒಳ ಹರಿವು ಒಂದೇ ದಿನಕ್ಕೆ ದುಪ್ಪಟ್ಟು ಆಗಿದೆ. ಕೃಷ್ಣರಾಜ ಸಾಗರ(KRS) ನೀರಿನ ಮಟ್ಟ 110 ಅಡಿ ದಾಟಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯಕ್ಕೆ ಭಾನುವಾರ(ಜೂನ್ 3) ಸಂಜೆ 13,418 ಕ್ಯೂಸೆಕ್ ನೀರು ಹರಿದು ಬಂದಿತ್ತು. ಇದೀಗ ಒಳ ಹರಿವಿನ ಪ್ರಮಾಣ 22,466 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸೋಮವಾರ ಸಂಜೆ ವೇಳೆಗೆ ಈ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸೋಮವಾರ(ಜೂನ್ 4) ಬೆಳಗ್ಗೆ ನೀರಿನ ಮಟ್ಟ 110.64 ಅಡಿಯಷ್ಟಿದೆ. ಡ್ಯಾಂನ ನೀರು ಶೇಖರಣೆಯ ಗರಿಷ್ಠ ಪ್ರಮಾಣ 49.452 ಟಿಎಂಸಿ ಆಗಿದ್ದು, ಈಗ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 32.370 ಟಿಎಂಸಿಯಷ್ಟಿದೆ.
ಜಲಾಶಯದಿಂದ ಇದೀಗ 1,296 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ವರದಿಯಾಗಿದೆ. ಮಳೆಯ ಪ್ರಮಾಣ ಹೀಗೆಯೇ ಮುಂದುವರಿದಲ್ಲಿ ಜುಲೈ ತಿಂಗಳಲ್ಲಿ KRS ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. 2021ರಲ್ಲಿ ಅಕ್ಟೋಬರ್ ವೇಳೆಗೆ ಜಲಾಶಯ ಭರ್ತಿಯಾಗಿತ್ತು.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ, ಕಾವೇರಿ ನದಿ ನೀರಿನ ಮಟ್ಟ ಏರಿಕೆ