ಮಂಡ್ಯ : ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಕಮಲ ಅರಳಿಸಲು ಅನ್ಯ ಪಕ್ಷಗಳ ಮುಖಂಡರಿಗೆ ಗಾಳ ಹಾಕಿರುವ ಬಿಜೆಪಿ ಪಕ್ಷ ಸಂಘಟನೆಗೆ ಸಮರ್ಥರೆನಿಸಿದ ಸೇನಾನಿಗಳನ್ನು ನೇಮಿಸಿಕೊಳ್ಳುವಲ್ಲಿ ಮೇಲಿಂದ ಮೇಲೆ ಎಡವುತ್ತಲೇ ಇದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ದುರ್ಬಲರಿಗೆ ಮಣೆ ಹಾಕಿಕೊಂಡು ಬಂದಿರುವ ವರಿಷ್ಠರು ಪಕ್ಷ ಸಂಘಟಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಸ್ವತಃ ಆ ಪಕ್ಷದ ಕಾರ್ಯಕರ್ತರೇ ಮುಂದಿಡುತ್ತಿದ್ದಾರೆ.
ಇಲ್ಲಿವರೆಗೆ ಸಚಿವ ಕೆ.ಸಿ.ನಾರಾಯಣಗೌಡ ಬೆಂಬಲಿಗ ವಿಜಯಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಸ್ವಪಕ್ಷೀಯರ ವಿರೋಧದ ನಡುವೆಯೇ ಅಧಿಕಾರ ಹಿಡಿದ ವಿಜಯಕುಮಾರ್ ಅವರು ಸ್ಥಳೀಯ ಸಂಸ್ಥೆಗಳು, ಮೇಲ್ಮನೆ ಚುನಾವಣೆಯಲ್ಲಿ ಏನೇನೂ ಚಮತ್ಕಾರ ಮಾಡಲಿಲ್ಲ. ಈ ಹಿಂದಿನಷ್ಟೂ ಮತಗಳ ಪ್ರಮಾಣ ಉಳಿಸಿಕೊಡಲಿಲ್ಲ.
ಸರ್ಕಾರದ ನಾಮಕರಣ ಸದಸ್ಯರಾಗಿ ಬಂದು, ಜೆಡಿಎಸ್ ಬೆಂಬಲದೊಂದಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCCB) ಅಧ್ಯಕ್ಷರಾಗಿರುವ ಸಿ.ಪಿ.ಉಮೇಶ್ ಅವರನ್ನು ಇದೀಗ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಿಸಿ, ಪಕ್ಷವನ್ನು ಸುಪರ್ದಿಗೆ ವಹಿಸಲಾಗಿದೆ.
ಇದನ್ನೂ ಓದಿ | ಸಿ.ಎಂ. ಇಬ್ರಾಹಿಂ ಜೆಡಿಎಸ್ ಮಾರ್ಗ ಪ್ರಶಸ್ತ: ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ
ಹಾಗೆ ನೋಡಿದರೆ, ಉಮೇಶ್ ಕೂಡ ಸರ್ವ ಸಮ್ಮತ ಆಯ್ಕೆಯೇನಲ್ಲ. ಸಂಘಟನಾ ಚತುರತೆ ಸಾಬೀತಾಗಿಲ್ಲ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಬೆಂಬಲಿಗ, ಸ್ಥಿತಿವಂತ ಎನ್ನವುದೇ ಉಮೇಶ್ ಗೆ ಇರುವ ಎರಡು ಮಾನದಂಡಗಳು. ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡ ನಿದರ್ಶನ ಇಲ್ಲವೆಂದು ಬಿಜೆಪಿ ಹೇಳುತ್ತಿದೆ. ನೂತನ ಅಧ್ಯಕ್ಷ ನೇಮಕಾತಿ ನಡೆದ ಮಾರನೆ ದಿನವೇ ಅಧಿಕಾರ ಹಸ್ತಾಂತರ ಮುಗಿದಿದೆ. ಸಮಾರಂಭದಲ್ಲಿ ಕೆಲವೇ ಕಾರ್ಯಕರ್ತರು ಭಾಗವಹಿಸಿರುವುದು ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿರುವ ಅಸಮಾಧಾನವನ್ನು ಬಹಿರಂಗಗೊಳಿಸಿದೆ.
ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಭಾಗಿಯಾಗಿಲ್ಲ. ಅನೇಕ ಮುಖಂಡರು ಸಮಾರಂಭಕ್ಕೆ ಬೆನ್ನು ತೋರಿದ್ದಾರೆ. ಈ ಬೆಳವಣಿಗೆಯು ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿಗೆ ಮತ್ತಷ್ಟು ಹಿನ್ನಡೆ ಉಂಟು ಮಾಡುವ ಮುನ್ಸೂಚನೆ ತೋರುತ್ತಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಸಚಿವ ನಾರಾಯಣ ಗೌಡ ಸೂಚನೆ