ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ (Mandya Municipal Council Election) ಮಂಡ್ಯ ನಗರಸಭೆ ಗದ್ದುಗೆ ಜೆಡಿಎಸ್-ಬಿಜೆಪಿ ಮೈತ್ರಿ ಪಾಲಾಗಿದೆ.
ಇಂದು ನಡೆದ ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ನಾಗೇಶ್, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆಯಾದರು. ಅಧಿಕಾರ ಹಿಡಿಯಲು ಎರಡು ಪಕ್ಷದವರಿಂದ ತಂತ್ರ-ಪ್ರತಿತಂತ್ರ ರೂಪಿಸಲಾಗಿತ್ತು.
ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ಸಿನ ಓರ್ವ ಸದಸ್ಯನನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮಂಡ್ಯ ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಮಂಡ್ಯ ನಗರಸಭೆ ಗದ್ದುಗೆ ಜೆಡಿಎಸ್-ಬಿಜೆಪಿ ಮೈತ್ರಿ ಪಾಲಾಗುತ್ತಿದ್ದಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಂಸದ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂಬ ಶಾಸಕ ಗಣಿಗ ರವಿ ಹೇಳಿಕೆಗೆ ತಿರುಗೇಟು ನೀಡಿದರು. ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಸನ್ನೇ, ಕೈಸನ್ನೇ ಮೂಲಕವೂ ಹಣದ ಆಮಿಷ ಒಡ್ಡಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಬೇಕಾಯ್ತು. ಕ್ಯಾಬಿನೆಟ್ ಸಭೆ ಬಿಟ್ಟು ಪ್ರಧಾನಮಂತ್ರಿ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್‌ಪರ್ಟ್, ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದ್ದರು. ನಮ್ಮ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡರು ಗೊತ್ತಿದೆ. ಮಹದೇವು ನಿಷ್ಠಾವಂತ ಜೆಡಿಎಸ್ ಸದಸ್ಯರು, ಪಕ್ಷ ಮುಖ್ಯ ಎಂದು ಉಪಾಧ್ಯಕ್ಷಕ್ಕೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ ಕುಟುಂಬ ಸದಸ್ಯರ ಬ್ಲಾಕ್ ಮೇಲ್ ಮಾಡಿದ್ದರು. ಅದಕ್ಕಾಗಿ ಸದಸ್ಯರನ್ನ, ಕುಟುಂಬಸ್ಥರನ್ನು ಇಟ್ಟುಕೊಂಡು ಚುನಾವಣೆ ಮಾಡಲು ಮುಂದಾಗಿದ್ದರು. ಮಹದೇವು ತೆಗೆದುಕೊಂಡ ನಿರ್ಧಾರ ಪಕ್ಷನಿಷ್ಠೆ ತೋರಿದೆ, ಅವರ ಮನೆಗೆ ತೆರಳಿ ಕೃತಜ್ಞತೆ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Weather : ಮತ್ತೆ ಭಾರಿ ಮಳೆ ಮುನ್ಸೂಚನೆ; ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಈ ಕುರಿತು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜಕೀಯ ಅಂದರೆ ಆಮಿಷ ಎಲ್ಲಾ ಸಹಜ. ಅಂತಿಮವಾಗಿ ನಂಬರ್ ಎನ್ನೋದು ಮುಖ್ಯ. ನಾವು ಆ ನಂಬರ್ ಅನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್‌ಡಿಎ ಗೆಲ್ಲುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.