ಕೆ.ಆರ್.ಪೇಟೆ: ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್ (Congress). ಹಲವು ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಭವ್ಯ ಇತಿಹಾಸ ಇರುವ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿಗೆ ಯಾವುದೇ ಇತಿಹಾಸ ಇಲ್ಲ. ದೇಶದ ಭವಿಷ್ಯಕ್ಕೆ ಬುನಾದಿ ಹಾಕಿದ್ದು ಕಾಂಗ್ರೆಸ್ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Mandya News) ಹೇಳಿದರು.
ಕೃಷ್ಣರಾಜನಗರದ ರೇಡಿಯೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಗ್ಯಾರಂಟಿ ಇಲ್ಲದಿದ್ದರೆ ಈ ಬರಗಾಲದಲ್ಲಿ ಜನ ಏನು ಮಾಡಬೇಕಿತ್ತು. ನಮ್ಮ ಗ್ಯಾರಂಟಿ ಬಂದಿದೆ. ಮೋದಿ ಗ್ಯಾರಂಟಿ ಎಲ್ಲಿ? ಬರಗಾಲದಲ್ಲಿ ಹಣ ಬಿಡುಗಡೆ ಮಾಡದವರು ರೈತರಿಗೆ ಏನು ಕೊಡ್ತಾರೆ. ನಮ್ಮ ತೆರಿಗೆ ಪಾಲು ನಮಗೆ ಕೊಡ್ತಿಲ್ಲ. ಬಿಜೆಪಿ ಜತೆ ಸೇರಿದವರಿಗೆ ಏತಕ್ಕೆ ವೋಟ್ ಹಾಕಬೇಕು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Vastu Tips: ಬಾತ್‌ರೂಮ್‌ನ ವಾಸ್ತು ದೋಷ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು; ನಿವಾರಣೆಗೆ ಇಲ್ಲಿದೆ ಟಿಪ್ಸ್
ಶಾಸಕ ರವಿಶಂಕರ್ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸುದ್ದಿಯಲ್ಲಿರುತ್ತೆ. ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಮೂಲಭೂತ ಸೌಕರ್ಯ ಕಲ್ಪಿಸಲು ನಿಮ್ಮ ಆಶೀರ್ವಾದ ಕಾರಣ. ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಎಂದು ತಿಳಿಸಿದರು.
ಕೆ.ಆರ್. ನಗರದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ 10 ತಿಂಗಳಲ್ಲಿ 200 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಏತನೀರಾವರಿ ಯೋಜನೆ ಘೋಷಣೆ ಮಾಡಿದೆ. ಸಾರ್ವಜನಿಕ ಆಸ್ಪತ್ರೆಗೆ 1 ಕೋಟಿ, ಯುವಕರಿಗೆ ಕ್ರೀಡಾ ಚಟುವಟಿಕೆಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ, ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ 30 ಕೋಟಿ, ಒಳಚರಂಡಿ ಕಾಮಗಾರಿಗೆ 20 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೂರಾರು ಕೋಟಿ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮಾತನಾಡಿ, ಜನ ಸೇವೆ ಮಾಡಲೆಂದು ಬಂದಿದ್ದು ನನ್ನನ್ನು ಬೆಂಬಲಿಸಿ ಆಶೀರ್ವದಿಸಬೇಕು. ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಸ್ಮರಿಸಿಕೊಂಡು ನನಗೆ ಮತನೀಡಿ ಎಂದರು.
ಶಾಸಕ ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿದರು.
ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್ ಮೊತ್ತ ಪರಿಶೀಲಿಸಬೇಕೆ?; ಜಸ್ಟ್ ಹೀಗೆ ಮಾಡಿ ಸಾಕು
ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಹಾಗೂ ಇತರರು ಇದ್ದರು.