ಮಂಡ್ಯ: ಕನ್ನಡ ಮಾತನಾಡುವುದಕ್ಕೆ ಬಾರದ ಮನುಷ್ಯ, ಪದ ಬಳಕೆ ಗೊತ್ತಿಲ್ಲ, ಭಾಷಾ ಜ್ಞಾನ ಗೊತ್ತಿಲ್ಲ, ನನಗೆ ಪಾಠ ಹೇಳಲು ಬರ್ತಾನೆ ಎಂದು ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್ ಜಿಲ್ಲಾ ಆಧ್ಯಕ್ಷ ರಮೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ನಿನಗೂ ಅಧ್ಯಕ್ಷ ಅಗಿದ್ದೆ, ಏಕವಚನ ಪ್ರಯೋಗ ನನಗೂ ಬರುತ್ತೆ, ನಾಲಿಗೆ ಮೇಲೆ ಹಿಡಿತವಿರಲಿ. ನಾನು ಒಂದು ಪಕ್ಷದ ಕಟ್ಟಾಳು, ಪಕ್ಷವನ್ನು ತಾಯಿ ಅಂತ ತಿಳಿದವನು ಎಂದು ಕಿಡಿ ಕಾರಿದರು.
ಇವರನ್ನ ಬೆಳೆಸಿದವರು ಯಾರು? ಪಕ್ಷಕ್ಕೆ ತಂದವರು ಯಾರು? ಉದ್ಯೋಗ ಕೊಟ್ಟ ಪಕ್ಷ ಯಾವುದು ಅಂತ ಗೊತ್ತಿಲ್ಲದೆ ಪಕ್ಷವನ್ನೇ ಚೂರು ಮಾಡುತ್ತೇನೆ ಎನ್ನುತ್ತಾರೆ. ಹೇಯ್ ಎಲ್ಲಿದ್ದೆ ನೀನು ಎಂದು ನಾರಾಯಣಗೌಡ್ರ ಬಾಯಲ್ಲಿ ಬರುತ್ತೆ, ನಾನು ಅದನ್ನೇ ಕೇಳುವೆ ಹೇಯ್ ನಾರಾಯಣಗೌಡ ನೀನು ಎಲ್ಲಿದ್ದೆ ಎಂದು ಆಕ್ರೋಶ ಹೊಡಹಾಕಿದರು.
ನಾನು ಈ ಪಕ್ಷದಲ್ಲಿ 1984-85ರಲ್ಲಿ ವಿದ್ಯಾರ್ಥಿಗಳ ನಾಯಕ, ದೇವೇಗೌಡ್ರ ಜತೆ ಅಂದೇ ಸೇರಿದವನು, ಅವರ ಜತೆಯಲ್ಲೇ ಇದ್ದೇನೆ. ನಿನ್ನ ತರಹ ಭಿಕ್ಷೆ ಪಾತ್ರೆ ಹಿಡುಕೊಂಡು ಪಾರ್ಟಿಯಿಂದ ಪಾರ್ಟಿಗೆ ಹೋಗಿಲ್ಲ ಎಂದು ಜರಿದ ರಮೇಶ್, ಮಿಸ್ಟರ್ ನಾರಾಯಣಗೌಡ ಯು ಆರ್ ಎ ಪೊಲಿಟಿಕಲ್ ಬೆಗ್ಗರ್ ಎಂದು ಛೇಡಿಸಿದರು.
ಬಿಎಸ್‌ಪಿ, ಜೆಡಿಎಸ್, ಬಿಜೆಪಿ ಈಗ ರಾತ್ರಿ ವೇಳೆ ಸಿದ್ದರಾಮಣ್ಣ, ಶಿವಕುಮಾರಣ್ಣನ ಮನೆ. ನನ್ನ ಮನೆ ಬಾಗಿಲಿಗೆ ಬಂದು ಬಿ ಫಾರ್ಮ್ ಕೊಡ್ಸು ಅಂದಿದ್ದು ನಾನೋ ನೀನೋ? ನಾನು ದೇವೇಗೌಡನ್ನು ದೇವರಂತೆ ಪೂಜೆ ಮಾಡುತ್ತೇನೆ. ನಾರಾಯಣಗೌಡ ಕಾಂಗ್ರೆಸ್‌ಗೆ ಹೋಗಲು ಯತ್ನಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಚೂರು ಚೂರು ಮಾಡಲು ಹೊರಟಿದ್ದಾರೆ. ಇವರ ಆಟ ಬಿಜೆಪಿ ವರಿಷ್ಠರಿಗೆ ಗೊತ್ತಿದೆ. ಅದಕ್ಕಾಗೇ ಮಂಡ್ಯ ಉಸ್ತುವಾರಿ ಕಿತ್ತೊಗೆದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!