ಮಂಡ್ಯ: ಯುವಕರಿಂದ ಹೊಸ ಅನ್ವೇಷಣೆ, ಆವಿಷ್ಕಾರಗಳು ನಡೆಯಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ. ಪದವಿ ಪೂರೈಸಿದವರನ್ನು 30% ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ಸೇರ್ಪಡೆ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಿಮ್ಮ ಜ್ಞಾನವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇತ್ತೀಚಿನ ದಿನದಲ್ಲಿ ಪದವಿ ಪಡೆದ 100 ಮಂದಿ ವಿದ್ಯಾರ್ಥಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ. ಉಳಿದವರು ಏನು ಮಾಡುತ್ತಾ ಇದ್ದಾರೆ ಎಂಬುದೇ ಪ್ರಶ್ನಾರ್ಥಕವಾಗಿ ಉಳಿದಿದೆ. ಪದವಿ ಪಡೆದವರು ಮನೆಯ ಜವಾಬ್ದಾರಿ ನಿಭಾಯಿಸುವ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮುಂದಾಗಬೇಕು ಎಂದರು.
ಈ ಹಿಂದೆ ಜಗತ್ತೇ ಭಾರತದ ಜ್ಞಾನವನ್ನು ಹಾಡಿ ಹೊಗಳಿ ಅಪ್ಪಿಕೊಂಡಿದೆ. ನಮ್ಮ ಪುರಾಣಗಳು ಯಾವ ವಿಜ್ಞಾನಕ್ಕೂ ಕಡಿಮೆಯೇನಿಲ್ಲ. ಆದರೆ, ನಮ್ಮಲ್ಲಿ ಜ್ಞಾನದ ಆವಿಷ್ಕಾರ ಆಗಬೇಕಿದ್ದು, ನಮ್ಮ ಜ್ಞಾನವನ್ನು ಇಡೀ ಜಗತ್ತೇ ಅಪ್ಪುವಂತಾಗಲಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪ್ರೊ. ಎಂ.ಆರ್.ಎಸ್. ರಾವ್ ಮಾತನಾಡಿ, ಇಡೀ ಜಗತ್ತಿಗೆ ಜ್ಞಾನವನ್ನು ಪಸರಿಸಿದ ದೇಶವೆಂಬ ಹೆಗ್ಗಳಿಕೆಗೆ ಭಾರತದ್ದಾಗಿತ್ತು. ಇಂದು ವಿದೇಶಗಳಿಂದ ಜ್ಞಾನವನ್ನು ಎರವಲು ಪಡೆಯುತ್ತಿರುವುದು ವಿಷಾದನೀಯ ಎಂದರು. ಹೊಸ ಸಂಶೋಧನೆಗಳೊಂದಿಗೆ ಭಾರತವನ್ನು ಪ್ರತಿನಿಧಿಸಿ, ಜಗತ್ತು ಭಾರತದತ್ತ ಬೆರಗು ಗಣ್ಣಿನಿಂದ ನೋಡುವಂತಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಘಟಿಕೋತ್ಸವದಲ್ಲಿ ಪದವಿ ಪಡೆದ 296 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. ಪುರುಷೋತ್ತ ಮಾನಂದನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪಕುಲಪತಿ ಡಾ. ಶೇಖರ್, ರಿಜಿಸ್ಟ್ರಾರ್ ಸುಬ್ಬರಾಯ, ಪ್ರಾಂಶುಪಾಲ ಎಂ.ಜಿ. ಶಿವರಾಮ್, ನರೇಂದ್ರ, ರಮೇಶ್ ಹಾಗೂ ಎ.ಟಿ. ಶಿವರಾಂ ಭಾಗವಹಿಸಿದ್ದರು.
ಇದನ್ನೂ ಓದಿ: ʼಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಗೌರವಿಸುತ್ತೇವೆʼ: ಮಾಜಿ ಸಿಎಂ ಸಿದ್ದರಾಮಯ್ಯ