Site icon Vistara News

Self Harming : ಬೇತಾಳನಂತೆ ಬೆನ್ನು ಬಿದ್ದ ನೋವು, ಸಂಕಟ ತಾಳಲಾರದೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ

Couple ends life

ಮಂಡ್ಯ: ಜೀವನದಲ್ಲಿ ಸದಾ ಒಂದಿಲ್ಲೊಂದು ಸೋಲು, ಸಂಕಟ, ಹತಾಶೆಗಳಿಂದ ಕಂಗಾಲಾಗಿದ್ದ ದಂಪತಿ ವಿಷ ಸೇವಿಸಿ (couple end life) ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಮೂಲಕ ಈ ಬದುಕಿನಿಂದ ಮುಕ್ತಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ (Mandya news) ಮಳವಳ್ಳಿ ಪಟ್ಟಣದ ಎನ್.ಇ.ಎಸ್. ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಎನ್.ಇಎಸ್‌ ಬಡಾವಣೆಯ ನಿವಾಸಿಗಳಾದ ರಾಜೇಶ್(45), ಸುಧಾ(40) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಅವರು ಇನ್ನು ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದು ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜೇಶ್‌ ಅವರು ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದರು. ಉದ್ಯೋಗದಲ್ಲಿ ಅವರಿಗೆ ದೊಡ್ಡ ಏಳಿಗೆ ಇರಲಿಲ್ಲ. ಸೋಲು ತನ್ನನ್ನು ಬೆನ್ನು ಹತ್ತಿದೆ ಎಂದು ಅವರು ಅಂದುಕೊಳ್ಳುತ್ತಿದ್ದರು. ಇದರ ನಡುವೆ ಅವರ ಕಾಲಿಗೆ ಗಾಯವಾಗಿ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಂಥ ಅಗ್ನಿಪರೀಕ್ಷೆ ಎಂದು ಅವರು ನೋವಿನಲ್ಲಿದ್ದರು. ಕಾಲು ಕತ್ತರಿಸಿದ್ದರಿಂದ ಚಿನ್ನದ ಕೆಲಸ ಮಾಡುವುದು ಕೂಡಾ ಕಷ್ಟವಾಗುತ್ತಿತ್ತು.

ಹಾಗಂತ ಅವರೇನೂ ತೀರಾ ಬಡವರಲ್ಲ. ಸಾಕಷ್ಟು ಸ್ಥಿತಿವಂತರೇ ಇದ್ದಾರೆ. ಆದರೆ ಮುಂದೆ ಬದುಕು ಕಷ್ಟವಾದೀತು ಎಂಬ ಭಯವೇ ಅವರನ್ನು ಸಾವಿನ ಕಡೆಗೆ ತಳ್ಳಿದೆ.

ತಾನು ಈಗಲೇ ಹೀಗಾದರೆ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ. ಹಾಗಿದ್ದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಅವರು ದಿಗಿಲುಕೊಂಡಿದ್ದರು. ಇದೇ ಸಂಕಟದಲ್ಲಿ ಮುಳುಗಿದ್ದರು ದಂಪತಿ. ಸೋಲು, ಮಕ್ಕಳಾಗದ ಚಿಂತೆ ಜೊತೆಗೆ ಕಾಲು ಕಳೆದುಕೊಂಡು ಬದುಕು ಇನ್ನಷ್ಟು ದಾರುಣವಾದೀತು ಎಂಬ ಭಯದಲ್ಲಿ ಅವರು ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.

ಅವರು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಳಗ್ಗೆ ಅಕ್ಕಪಕ್ಕದವರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Self Harming : 12ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವಾಯ್ತಾ ಮಾನಸಿಕ ಖಿನ್ನತೆ

ಕೊಡಗಿನಲ್ಲಿ ಅರಣ್ಯಾಧಿಕಾರಿ ನೇಣಿಗೆ ಶರಣು, ಕಾರಣ ನಿಗೂಢ

ಕೊಡಗು: ಕೊಡಗಿನಲ್ಲಿ ಯುವ ಅರಣ್ಯಾಧಿಕಾರಿಯೊಬ್ಬರು (forest officer) ನೇಣು ಬಿಗಿದು ಆತ್ಮಹತ್ಯೆಗೆ (self harm) ಶರಣಾಗಿದ್ದಾರೆ.

ಮಡಿಕೇರಿಯ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ಮೂಲದ ರಶ್ಮಿ(27) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ DRFO ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಶ್ಮಿ ಕೊಡಗು ಜಿಲ್ಲೆ ಮಡಿಕೇರಿಯ ಅರಣ್ಯ ಭವನ ಬಳಿ ಇರುವ ವಸತಿ ಗೃಹದಲ್ಲಿ ತಂಗಿದ್ದರು. ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಆತ್ಮಹತ್ಯೆ‌ (suicide case) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version