Site icon Vistara News

Star Chandru: ಕೆ.ಆರ್.ನಗರ ತಾಲೂಕಿನ ವಿವಿಧೆಡೆ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರು ಭರ್ಜರಿ ಪ್ರಚಾರ

Star Chandru

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು. ಪ್ರಚಾರ ಆರಂಭಕ್ಕೂ ಮುನ್ನ ಮಾರಗೌಡನಹಳ್ಳಿ ಶ್ರೀ ಬಸವೇಶ್ವರ ದೇವಸ್ಥಾಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.

ಸ್ಟಾರ್ ಚಂದ್ರುಗೆ ಅತಿಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ: ಶಾಸಕ ರವಿಶಂಕರ್

ಸಾಮಾನ್ಯನಾದ ನನ್ನನ್ನು ಗೆಲ್ಲಿಸಿದಂತೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕೈಬಲಪಡಿಸಬೇಕು ಎಂದು ಶಾಸಕ ರವಿಶಂಕರ್ ಮತದಾರರಲ್ಲಿ ಮನವಿ ಮಾಡಿದರು.

ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರೊಟ್ಟಿಗೆ ಕೆ.ಆರ್.ನಗರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮಗಳ ರಸ್ತೆ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಮಾಡುವುದರ ಜೊತೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸ್ಟಾರ್ ಚಂದ್ರು ಅವರು ಸಂಸದರಾಗಿ ಆಯ್ಕೆಯಾದರೆ ರಾಜ್ಯ ಸರ್ಕಾರದ, ನಮ್ಮ ಜೊತೆಗೂಡಿ ಕೆಲಸ ಮಾಡಲಿದ್ದಾರೆ. ಸರ್ಕಾರದ ಅನುದಾನದ ಜೊತೆಗೆ ಕೈಯಿಂದ ಹಣ ಹಾಕಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಅವರು ಕ್ಷೇತ್ರದ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯರಾದ ಸಿ.ಪಿ.ರಮೇಶ್‌ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಇದ್ದರು.

ಇದನ್ನೂ ಓದಿ | Lok Sabha Election 2024: ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ: ಈ. ತುಕಾರಾಂ

ಸೌಮ್ಯಾರೆಡ್ಡಿ ಪರ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭರ್ಜರಿ ಪ್ರಚಾರ

ಬೆಂಗಳೂರು: ನಗರದ ಹೊರವಲಯದ ಬೊಮ್ಮನಹಳ್ಳಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಪರ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಭರ್ಜರಿ ಪ್ರಚಾರ ನಡೆಸಿದರು. ಹೊಂಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಹೆಚ್ಚು ತೆಲುಗು ಭಾಷಿಕರು ವಾಸವಾಗಿರುವ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಪ್ರಚಾರ ಮಾಡಿದರು.

ತೆಲುಗು ಭಾಷಿಕರು ಮತ್ತು ರೆಡ್ಡಿ ಮತ ಸೆಳೆಯಲು ರೇವಂತ್ ರೆಡ್ಡಿ ಅಖಾಡಕ್ಕೆ ಇಳಿದಿದ್ದು, ಅವರಿಗೆ ರೆಡ್ಡಿಗೆ ಸಚಿವ ರಾಮಲಿಂಗಾರೆಡ್ಡಿ, ಅಭ್ಯರ್ಥಿ ಸೌಮ್ಯಾರೆಡ್ಡಿ, ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸ್ ಗೌಡ ಸಾಥ್ ನೀಡಿದರು.

ಪ್ರಚಾರದ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾರೆಡ್ಡಿ ಗೆಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಕಳುಹಿಸಿದೆ. ಇಲ್ಲಿ ಇಷ್ಟೊಂದು ತೆಲುಗು ಭಾಷಿಕರು ಇದ್ದಾರೆ ಎಂದು ನನಗೆ ಗೊತ್ತಿಲ್ಲ. ಆಂಧ್ರಪ್ರದೇಶದದಿಂದ ಬಂದು ಇಲ್ಲಿ ಜೀವನ ನಡೆಸುತ್ತಿರುವ ನಿಮಗೆ ಅಭಿನಂದನೆ. ಬೆಂಗಳೂರು ಮಹಾನಗರದಲ್ಲಿ ನೀವು ಲಕ್ಷಾಂತರ ಮಂದಿ ನೆಮ್ಮದಿಯಾಗಿ ಜೀವಿಸಲು, ರಾಜೀವ್ ಗಾಂಧಿ ಅವರು ಮಾಡಿದ ಕಂಪ್ಯೂಟರ್ ಕ್ರಾಂತಿ ಕಾರಣ. ಹಾಗಾಗಿ ಇಲ್ಲಿಗೆ ಬಂದು ಉದ್ಯೋಗ ಮಾಡುತ್ತಿದ್ದೀರಾ ಎಂದರು.

ನನ್ನನ್ನು ಜೈಲಿಗೆ ಕಳುಹಿಸಿದರು, ಆದ್ರೆ ತೆಲಂಗಾಣ ಜನ ನನ್ನ ಸಿಎಂ ಮಾಡಿದ್ರು. ಕರ್ನಾಟಕದಲ್ಲಿ ಕೂಡ ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ರು, ಕರ್ನಾಟಕ ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆಲುತ್ತೇನೆ ಅಂತ ಮೋದಿ ಹೇಳ್ತಾರೆ. ಆದ್ರೆ ಕರ್ನಾಟಕದಲ್ಲಿ ದೇವೇಗೌಡ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಕಾಲು ಹಿಡಿಯೋದು ಯಾಕೆ? ಕರ್ನಾಟಕ ಮತ್ತು ತೆಲಂಗಾಣದಲ್ಲಿ 70 ಮಂದಿ ಗೆಲ್ಲಿಸಿ ಕಳುಹಿಸಿದರೆ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ. ಗುಜರಾತ್‌ನಲ್ಲಿ ಏಳು, ಉತ್ತರಪ್ರದೇಶಕ್ಕೆ ಹನ್ನೆರಡು ಮಂತ್ರಿ ಸ್ಥಾನ ನೀಡಿದ್ದಾರೆ. ದಕ್ಷಿಣ ರಾಜ್ಯಗಳ ಸಮಸ್ಯೆ ಬಗ್ಗೆ ಮೋದಿ ಸರ್ಕಾರಕ್ಕೆ ತಾತ್ಸಾರ ಮನೋಭಾವ ಇದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Exit mobile version