Site icon Vistara News

Star Chandru: ರೈತರ ಹಿತ ಕಾಯಲು ಪಂಚ ನ್ಯಾಯ ಜಾರಿಗೆ ಕಾಂಗ್ರೆಸ್‌ ಬದ್ಧ: ಸ್ಟಾರ್ ಚಂದ್ರು

Star Chandru

ಮೇಲುಕೋಟೆ: ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸಿದೆ. ಅವರ ಸಂಕಷ್ಟದ ಕರೆಗೆ ಕಿವಿಗೊಟ್ಟು ಪಂಚ ನ್ಯಾಯಗಳನ್ನು ಒಳಗೊಂಡ ʼಕಿಸಾನ್‌ ನ್ಯಾಯʼವನ್ನು ಘೋಷಣೆ ಮಾಡುವ ಮೂಲಕ ರೈತರ ಹಿತ ಕಾಪಾಡಲು ಪಕ್ಷ ಬದ್ಧವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಸರ್ವೋದಯ ಕರ್ನಾಟಕ ಪಕ್ಷದ ಜೊತೆಗೂಡಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಅಧಿಕಾರಕ್ಕೇರಿದ ಕೂಡಲೇ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಭರವಸೆ ನೀಡಲಾಗುತ್ತದೆ ಎಂದರು.

ಎಂಎಸ್‌ಪಿಗೆ ಕಾನೂನು ಖಾತರಿ ನೀಡುವುದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗಲಿದ್ದು, ಅವರ ಜೀವನ ಪರಿಸ್ಥಿತಿ ಸುಧಾರಿಸಲಿದೆ. ಇದರ ಜೊತೆಗೆ ರೈತರ ಸಾಲಮನ್ನಾ ಮಾಡುವ ಐತಿಹಾಸಿಕ ಮತ್ತು ಕ್ರಾಂತಿಕಾರಿ ನಡೆಗೆ ಕಾಂಗ್ರೆಸ್ ಮುಂದಾಗಿದ್ದು ಇದಕ್ಕೆ ಜನಾಶೀರ್ವಾದ ಬೇಕಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಎಂಎಸ್‌ಪಿ, ಕೃಷಿ ಸಾಲಮನ್ನಾ, ಬೆಳೆ ನಷ್ಟವಾದರೆ 30 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿ ಮಾಡುವ ವಿಮಾ ಯೋಜನೆ, ಹೊಸ ಆಮದು-ರಫ್ತು ನೀತಿ ಹಾಗೂ ಕೃಷಿ ಯಂತ್ರೋಪಕರಣಗಳು, ರಸಗೊಬ್ಬರ, ಬಿತ್ತನೆಬೀಜಗಳ ಮೇಲಿನ ಜಿಎಸ್ ಟಿಯನ್ನು ತೆಗೆದುಹಾಕಲಾಗುತ್ತದೆ ಎಂದರು.

ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಹತ್ತು ಹಲವು ಯೋಜನೆಗಳನ್ನು ತಂದಿದೆ. ರೈತರು ಈ ದೇಶದ ಬೆನ್ನೆಲುಬು. ರೈತರ ಹಿತ ಕಾಯಲು ಕಾಂಗ್ರೆಸ್ ಬದ್ಧವಾಗಿದೆ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಶಕ್ತಿ ತುಂಬಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಕರೆಕೊಟ್ಟರು.

ಇದನ್ನೂ ಓದಿ | Pralhad Joshi: ಬಿಜೆಪಿ ಪ್ರಣಾಳಿಕೆ: ವಿಕಸಿತ ಭಾರತ ನಿರ್ಮಾಣವೇ ಮೋದಿ ಗ್ಯಾರಂಟಿ ಎಂದ ಪ್ರಲ್ಹಾದ್‌ ಜೋಶಿ

ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಾಜಿ ಶಾಸಕ ರಾಮಣ್ಣ, ಎಐಸಿಸಿ ಕಾರ್ಯದರ್ಶಿ ಹಾಗೂ ಕೇರಳದ ಕಾಂಗ್ರೆಸ್ ಶಾಸಕರಾದ ರೋಜಿ ಎಂ. ಜಾನ್ ಸೇರಿದಂತೆ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಕಾಂಗ್ರೆಸ್ ನ ಹಲವು ಮುಖಂಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.

Exit mobile version