ಮಡಿಕೇರಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ (ಮಂಗಳೂರು ಸ್ಫೋಟ) ಸಂಬಂಧಿಸಿ ಪೊಲೀಸರು ಈಗಾಗಲೇ ಉಗ್ರ ಮೊಹಮ್ಮದ್ ಶಾರಿಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯ ವೇಳೆ ಹಲವು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹೀಗೆ ಬೆಳಕಿಗೆ ಬಂದ ಹೊಸ ಸಂಗತಿಗಳಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ರೂವಾರಿಗಳು ಕೊಡಗಿನ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು ಎನ್ನುವುದು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದಲ್ಲಿರುವ ಓಟೆಕಾಡ್ ಹೋಂ ಸ್ಟೇನಲ್ಲಿ ಉಗ್ರರು ತಂಗಿದ್ದರು ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಹೋಂ ಸ್ಟೇ ಮೇಲೆ ಎನ್‌ಐಎ ಅಧಿಕಾರಿಗಳು ಮತ್ತು ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಕೆಲಸ ಮಾಡಿದ್ದ ಸುಮಾರು ೧೧ ಮಂದಿ ಆರೋಪಿಗಳು ಈ ಹೋಮ್ ಸ್ಟೇನಲ್ಲಿ ಕೆಲವು ದಿನ ತಂಗಿದ್ದರು ಎಂದು ಹೇಳಲಾಗಿದೆ.
ಓಟೆಕಾಡ್ ಹೋಂ ಸ್ಟೇ ಪ್ರಧಾನ ರಸ್ತೆಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರವಿದೆ. ಇದು ಕಾಡಿನ ಒಳಗಿರುವ ಪ್ರದೇಶವಾಗಿದ್ದು, ಹೊರಗಿನವರು ಭೇಟಿ ನೀಡುವ ಅವಕಾಶಗಳು ಇರುವುದಿಲ್ಲ. ಹೋಮ್‌ಸ್ಟೇಗೆ ಬುಕ್ ಮಾಡಿಕೊಂಡವರು ಮಾತ್ರ ಬರುತ್ತಾರೆ. ಹೀಗಾಗಿ ಇದನ್ನು ತಮ್ಮ ಚರ್ಚೆಯ ಸುರಕ್ಷಿತ ತಾಣವಾಗಿ ಆರೋಪಿಗಳು ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಎನ್‌ಐಎ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹೋಂಸ್ಟೇ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಇದು ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶವಾಗಿದೆ.
ಆ ೧೧ ಮಂದಿ ಯಾರು?
ಶಿವಮೊಗ್ಗದ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ನಿವಾಸಿಯಾಗಿರುವ ಮೊಹಮ್ಮದ್ ಶಾರಿಕ್ ಮೈಸೂರಿನಲ್ಲಿ ಒಂಟಿಯಾಗಿ ವಾಸವಾಗಿದ್ದ ಎನ್ನಲಾಗಿತ್ತು. ಒಬ್ಬನೇ ಮಂಗಳೂರಿಗೆ ಬಂದಿದ್ದ ಎಂಬ ಮಾಹಿತಿಯೂ ಇತ್ತು. ಹಾಗಿದ್ದರೆ ಈ ೧೧ ಮಂದಿ ಬಂದಿ ಯಾರಿರಬಹುದು? ಅವರು ಈ ಕೃತ್ಯದಲ್ಲಿ ಹೊಂದಿರುವ ಪಾತ್ರವೇನು ಎನ್ನುವುದನ್ನು ಪೊಲೀಸರ ತನಿಖೆ ಮೂಲಕ ಪತ್ತೆ ಹಚ್ಚಬೇಕಾಗಿದೆ.
ಶಾರಿಕ್‌ಗೆ ಆತನದೇ ಊರಿನವನಾದ ಉಗ್ರ ಮತೀನ್‌ನ ಬೆಂಬಲವಿತ್ತು ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಆತನ ಬೆಂಬಲದಿಂದಲೇ ಆತ ಬಾಂಬ್ ತಯಾರಿಕೆಗೆ ಮುಂದಾಗಿ ಟ್ರಯಲ್ ಬ್ಲಾಸ್ಟನ್ನು ಕೂಡಾ ನದಿ ತೀರಗಳಲ್ಲಿ ನಡೆಸಿದ್ದ. ಮೈಸೂರಿನಲ್ಲಿ ಒಂಟಿಯಾಗಿದ್ದರೂ ಆತನ ಸುತ್ತ ಒಂದು ಉಗ್ರರ ಕೂಟವೇ ಸುತ್ತುವರಿದಿತ್ತು ಎನ್ನುವುದು ಸ್ಪಷ್ಟವಾಗಿದೆ.
ಇದೀಗ ಹೋಮ್ ಸ್ಟೇನಲ್ಲಿನ ಸಿಸಿ ಟಿವಿ ಫೂಟೇಜ್, ಅಲ್ಲಿ ಕೊಟ್ಟಿರುವ ಮಾಹಿತಿ ಮತ್ತು ಫೋಟೊಗಳ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಬಹುದಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಚಾರ್ಮಾಡಿ ತಪ್ಪಲಲ್ಲಿ ನಡೀತಾ ಟ್ರಯಲ್ ಬ್ಲಾಸ್ಟ್? ಸ್ಯಾಟಲೈಟ್ ಫೋನ್ ತನಿಖೆ ವೇಳೆ ಸಿಕ್ಕ ಸ್ಫೋಟಕ ಮಾಹಿತಿ