Site icon Vistara News

ಮಂಗಳೂರು ಸ್ಫೋಟ | Confirm! ಮಂಗಳೂರು ಬಾಂಬ್‌ ಬ್ಲಾಸ್ಟ್‌ ರೂವಾರಿ ತೀರ್ಥಹಳ್ಳಿಯ ಶಾರಿಕ್‌

Shariq Mangalore blast shimogga

ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದಿನ ರೂವಾರಿ ತೀರ್ಥಹಳ್ಳಿಯ ಶಾರಿಕ್‌ ಎನ್ನುವುದು ಬಹುತೇಕ ಖಚಿತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ವ್ಯಕ್ತಿಯ ಫೋಟೊ ವಿಸ್ತಾರ ನ್ಯೂಸ್‌ ಗೆ ಲಭ್ಯವಾಗಿದೆ. ಈ ಭಾವಚಿತ್ರಕ್ಕೂ ಶಾರಿಕ್‌ ತನ್ನ ತಂದೆಯ ಬಟ್ಟೆ ಶಾಪ್‌ನಲ್ಲಿರುವ ಚಿತ್ರಕ್ಕೂ ತುಂಬಾ ಹೋಲಿಕೆ ಇದ್ದು, ಆತನೇ ಇವನು ಎನ್ನುವುದು ಸ್ಪಷ್ಟವಾಗಿದೆ. ಆದರೆ, ಪೊಲೀಸರು ಸಂಪೂರ್ಣ ಮಹಜರು ಮತ್ತು ತನಿಖೆಯ ಬಳಿಕವಷ್ಟೇ ಇದನ್ನು ಫೈನಲ್‌ ಮಾಡಬೇಕಾಗಿದೆ. ಈಗಾಗಲೇ ಶಾರಿಕ್‌ನ ಮನೆಯವರನ್ನು ಮಂಗಳೂರಿಗೆ ಕರೆ ತರಲಾಗಿದ್ದು, ಅವರು ಈತನೇ ಶಾರಿಕ್‌ ಎನ್ನುವುದನ್ನು ಗುರುತಿಸಿ ಅಧಿಕೃತತೆ ನೀಡಬೇಕಾಗಿದೆ.

ಎರಡು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ದಾಳಿ ಮತ್ತು ವಿಚಾರಣೆಯ ವೇಳೆ ಶಿವಮೊಗ್ಗದ ಯಾಸಿನ್‌, ಮಂಗಳೂರಿನ ಮಾಜ್‌ ಮತ್ತು ತೀರ್ಥಹಳ್ಳಿಯ ಶಾರಿಕ್‌ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಯಾಸಿನ್‌ ಮತ್ತು ಮಾಜ್‌ನನ್ನು ಪೊಲೀಸರು ಬಂಧಿಸಿದ್ದರಾದರೂ ಶಾರಿಕ್‌ ತಪ್ಪಿಸಿಕೊಂಡಿದ್ದ.

ಶಾರಿಕ್‌ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದು, ತೀರ್ಥಹಳ್ಳಿಯಲ್ಲಿದ್ದ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದು, ಬಳಿಕ ಶಾರಿಕ್‌ನೇ ಇದನ್ನು ಮುಂದುವರಿಸಿದ್ದ. ಈತ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಶಿವಮೊಗ್ಗದ ಪೊಲೀಸರು ಉಗ್ರ ಚಟುವಟಿಕೆ ಮಾಡುತ್ತಿರುವವರ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಶಾರಿಕ್‌ ತಲೆಮರೆಸಿಕೊಂಡಿದ್ದ. ಅಲ್ಲಿಂದ ಮುಂದೆ ಆತ ಯಾರ ಕೈಗೂ ಸಿಕ್ಕಿರಲಿಲ್ಲ.

ಅದೇ ಶಾರಿಕ್‌ ಈಗ ಮಂಗಳೂರಿನಲ್ಲಿ ಉಗ್ರ ಕೃತ್ಯಕ್ಕೆ ಮತ್ತೊಂದು ಸ್ಕೆಚ್‌ ಹಾಕುತ್ತಿದ್ದ ಎನ್ನುವುದು ಈಗ ಬಹುತೇಕ ಬಯಲಾಗಿದೆ.

ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ಶೇಕಡಾ ೫೦ರಷ್ಟು ಸುಟ್ಟ ಗಾಯಕ್ಕೊಳಗಾಗಿದ್ದಾನೆ. ಅವನಿಗೆ ಮಾತನಾಡಲು ಆಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೊದಲ ನೋಟಕ್ಕೇ ಆತ ಶಾರಿಕ್‌ ಎನ್ನುವುದು ಬಹುತೇಕ ಸ್ಪಷ್ಟವಾಗುತ್ತದೆ.

ಮಂಗಳೂರು ಗೋಡೆ ಬರಹದಲ್ಲೂ ಆರೋಪಿ
ಈ ಹಿಂದೆ ಪ್ರೇಮ್‌ ಸಿಂಗ್‌ಗೆ ಚಾಕು ಇರಿದಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜ್ ಹಾಗೂ ಸೈಯದ್ ಯಾಸೀನ್ ಎಂಬುವವರಿಂದ ಶಾರೀಕ್‌ ಹೆಸರು ಬಹಿರಂಗಗೊಂಡಿತ್ತು. ಈ ಶಾರೀಕ್‌ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದಾನೆ. ಈತ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ‌ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ೨ನೇ ಆರೋಪಿಯಾಗಿದ್ದ ಶಾರೀಕ್‌ನನ್ನು ಬಂಧಿಸಲಾಗಿತ್ತು. ಈತನಿಗೆ 8 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.

ಈತ ತನ್ನ ಸಹಚರರಾದ ಮಾಜ್‌ ಹಾಗೂ ಸೈಯದ್‌ ಯಾಸೀನ್‌ಗೆ ಬಾಂಬ್‌ ತಯಾರಿಕೆ ತರಬೇತಿಯನ್ನು ಕೊಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಬಾಂಬ್‌ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹಣವನ್ನೂ ಕೊಡುತ್ತಿದ್ದ ಎಂಬ ವಿಚಾರ ಬಯಲಾಗಿತ್ತು. ಶಿವಮೊಗ್ಗ ಸುತ್ತಮುತ್ತ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದನೇ ಎಂಬ ವಿಚಾರವಾಗಿ ತನಿಖೆ ನಡೆಯುತ್ತಿತ್ತು. ಆದರೆ, ಶಾರೀಕ್‌ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ | Mangalore Blast | ಕೊಯಮತ್ತೂರು- ಮಂಗಳೂರು ಸ್ಫೋಟಗಳ ಮಧ್ಯೆ ಇದೆಯಾ ಸಾಮ್ಯತೆ?

Exit mobile version