ವಿವೇಕ್ ಮಹಾಲೆ, ವಿಸ್ತಾರ ನ್ಯೂಸ್ ಶಿವಮೊಗ್ಗ
ಮಂಗಳೂರಿನಲ್ಲಿ ನಡೆದಿರುವ ನಡೆದಿರುವ ಆಟೋ ರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್‌ನಿಂದಾಗಿ (ಮಂಗಳೂರು ಸ್ಫೋಟ) ಇಡೀ ನಾಡೇ ಬೆಚ್ಚಿಬಿದ್ದಿದೆ. ಈ ಘಟನಾವಳಿಗಳಿಗೆ ಮಲೆನಾಡಿನ ತುಂಗಾ ತೀರದ ಲಿಂಕ್ ಇರುವುದು ಇನ್ನಷ್ಟು ಆಘಾತಕಾರಿಯಾಗಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್‌ನ ಪ್ರಧಾನ ಆರೋಪಿ ಉಗ್ರ ಶಾರೀಕ್ ಶಿವಮೊಗ್ಗದ ತೀರ್ಥಹಳ್ಳಿಯವನು. ಜತೆಗೆ ಅವನಿಗೆ ಬೆಂಬಲವಾಗಿ ನಿಂತಿದ್ದಾನೆ ಎಂದು ಹೇಳಲಾದ ಅಬ್ದುಲ್ ಮತೀನ್ ಕೂಡಾ ತೀರ್ಥಹಳ್ಳಿಯವನು. ಇದರ ಜತೆಗೆ ಈ ಹಿಂದೆ ಬಂಧನಕ್ಕೆ ಒಳಗಾದ ಯಾಸಿನ್ ಶಿವಮೊಗ್ಗದವನು. ಇವರ ಜತೆಗೆ ಟ್ರಯಲ್ ಬ್ಲಾಸ್ಟ್‌ನಲ್ಲಿ ಭಾಗವಹಿಸಿದ್ದ ಮಂಗಳೂರಿನ ಮಾಜ್ ಮುನೀರ್‌ಗೂ ಶಿವಮೊಗ್ಗದ ಲಿಂಕ್ ಇದೆ. ಈ ಎಲ್ಲ ಕಾರಣಗಳಿಂದಾಗಿ ಶಿವಮೊಗ್ಗದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ತೀರ್ಥಹಳ್ಳಿಯ ಹಲವು ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.
ಸಾವರ್ಕರ್ ಫ್ಲೆಕ್ಸ್ ಗಲಾಟೆಯ ಬಳಿಕ
ಶಿವಮೊಗ್ಗದಲ್ಲಿ ಕಳೆದ ಆ. 15ರಂದು ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವೇಳೆ ಉಂಟಾದ ಗಲಾಟೆ ಪ್ರಕರಣದ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿತವಾಗಿತ್ತು. ಜಬಿಯುಲ್ಲಾ ಎಂಬಾತ ಪ್ರೇಮ್ ಸಿಂಗ್‌ಗೆ ಚಾಕುವಿನಿಂದ ಇರಿದಿದ್ದ. ಆ ವೇಳೆ, ಪೊಲೀಸರು ಜಬಿ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದರು. ಇದೇ ಲಿಂಕ್ ಇದೀಗ ಶಾರೀಕ್ ವರೆಗೂ ತಂದು ನಿಲ್ಲಿಸಿದೆ.
ಪ್ರೇಮ್ ಸಿಂಗ್‌ಗೆ ಚಾಕುವಿನಿಂದ ಇರಿದಿದ್ದ ಜಬೀವುಲ್ಲಾನ ಮೊಬೈಲ್ ಪರಿಶೀಲನೆ ವೇಳೆ ಆತನಿಗೆ ಶಾರಿಕ್‌ನ ಜತೆ ಸಂಪರ್ಕವಿರುವುದು ಪತ್ತೆಯಾಗಿತ್ತು. ಜತೆಗೆ ಶಿವಮೊಗ್ಗದ ಯಾಸೀನ್, ಮಂಗಳೂರಿನ ಮಾಜ್ ಮುನೀರ್‌ನ ಪರಿಚಯ ಇರುವುದು ತಿಳಿದುಬಂದಿತ್ತು. ಜಬೀ ಬಂಧನವಾಗುತ್ತಿದ್ದಂತೆಯೇ ತಾನೂ ಸಿಕ್ಕಿಬೀಳುವ ಸೂಚನೆ ಅರಿತ ಶಾರಿಕ್ ಆಗಸ್ಟ್ ೨೩ರಿಂದಲೇ ನಾಪತ್ತೆಯಾಗಿದ್ದ. ಈ ನಡುವೆ ಜಬಿ ಹೇಳಿಕೆಯನ್ನು ಆಧರಿಸಿ ಪೊಲೀಸರು ಉಗ್ರ ಸಂಚನ್ನು ಬಯಲು ಮಾಡಿದ್ದರು. ಬಳಿಕ ಯಾಸೀನ್ ಹಾಗೂ ಮಾಜ್ ಮುನೀರ್ ಇಬ್ಬರನ್ನು ಬಂಧಿಸಲಾಗಿತ್ತು. ಅದಕ್ಕಿಂತ ಮೊದಲೇ ಅಂದರೆ ಆಗಸ್ಟ್ ೨೩ರಿಂದಲೇ ಶಾರಿಕ್ ನಾಪತ್ತೆಯಾಗಿದ್ದ.
ಶಿವಮೊಗ್ಗದಿಂದ ತಪ್ಪಿಸಿಕೊಂಡಿದ್ದ ಆತ ಎಲ್ಲಿ ಹೋಗಿದ್ದ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಈಗ ತಿಳಿಬಂದಿರುವ ಮಾಹಿತಿ ಪ್ರಕಾರ ಆತ ಮೊದಲು ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಕೇರಳ, ತಮಿಳುನಾಡೆಲ್ಲ ಸುತ್ತಾಡಿ ಮೈಸೂರಿನಲ್ಲಿ ಒಂದಷ್ಟು ಕಾಲ ನೆಲೆಸಿ ಕುಕ್ಕರ್ ಬಾಂಬ್ ಹಿಡಿದುಕೊಂಡು ಮಂಗಳೂರಿಗೆ ಬಂದಿದ್ದ.
ಶಾರಿಕ್ ಈ ಸ್ಫೋಟದ ರೂವಾರಿ ಎಂದು ತಿಳಿಯುತ್ತಿದ್ದಂತೆಯೇ ತೀರ್ಥಹಳ್ಳಿಯ ಹಲವು ಮನೆಗಳಿಗೆ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ಶಾರಿಕ್‌ನ ಚಿಕ್ಕಮ್ಮ, ಸೋದರಿ ಸೇರಿದಂತೆ ಎಲ್ಲರನ್ನೂ ಮಂಗಳೂರಿಗೆ ಕರೆದುಕೊಂಡು ಹೋಗಿ ಶಾರಿಕ್‌ನ ಗುರುತುಪತ್ತೆ ಮಾಡಿದ್ದಾರೆ. ಈ ಘಟನೆ ಇಲ್ಲಿಗೇ ನಿಲ್ಲುವ ಲಕ್ಷಣಗಳಿಲ್ಲ. ತೀರ್ಥಹಳ್ಳಿ ಭಾಗದಲ್ಲಿ ಇನ್ನಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ತೀರ್ಥಹಳ್ಳಿಯ ಶಂಕಿತ ಉಗ್ರ ಶಾರೀಕ್ ಮನೆ ಹಾಗೂ ಆತನ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿರುವ ಪೊಲೀಸರಿಗೆ ಹಲವಾರು ಸುಳಿವುಗಳ ಜೊತೆಗೆ ಬಲವಾದ ಸಾಕ್ಷ್ಯಗಳು ದೊರೆತಿವೆ ಎಂದೇ ಹೇಳಲಾಗುತ್ತಿದೆ.
ಅದರಲ್ಲೂ ಮುಖ್ಯವಾಗಿ, ಶಾರೀಕ್ ನನ್ನು ಗುರುತಿಸಲು ಮಂಗಳೂರಿಗೆ ತೆರಳಿರುವ ಶಾರೀಕ್ ಸಹೋದರಿಯರ ಅಕೌಂಟ್ ಗೆ ಬೇರೆ ಬೇರೆ ಮೂಲಗಳಿಂದ ಲಕ್ಷಗಟ್ಟಲೇ ಹಣ ಸಂದಾಯವಾಗಿರುವ ಮಹತ್ವದ ಸುಳಿವು ಪತ್ತೆಯಾಗಿದೆ.
ಹೀಗಾಗಿ, ಉಗ್ರರ ಕರಿನೆರಳು ಬಿದ್ದಿರುವ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಬೇಕಿದ್ದು, ಇವರಿಗೆ ಕಡಿವಾಣ ಹಾಕಬೇಕೆಂದರೆ, ಉಗ್ರ ಚಟುವಟಿಕೆ ವಿರುದ್ಧ ಬಹಳ ಸೀರಿಯಸ್ ಆಗಿ ಕ್ರಮವಾಗಬೇಕೆಂಬುದು ಮಾಜಿ ಸಚಿವ ಈಶ್ವರಪ್ಪನವರ ಆಗ್ರಹವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು. ಅಲ್ಲದೇ, ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು ಅಥವಾ ನೇಣುಗಂಬಕ್ಕೆ ಏರಿಸಬೇಕೆಂಬುದು ಆಗ್ರಹವಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಹಿಂದಿರುವ ಮೇನ್ ಹ್ಯಾಂಡ್ಲರ್ ಮತೀನ್ ತಾಹಾ: ಇವನ ಅಪ್ಪ ಒಬ್ಬರು ಸಜ್ಜನ ಮಾಜಿ ಸೈನಿಕ!