ಮೈಸೂರು: ಮಂಗಳೂರು ಬಾಂಬ್ ಸ್ಫೋಟದ ರೂವಾರಿ ಮೈಸೂರಿನ ಮೇಟಗಳ್ಳಿಯ ಮೋಹನ್ ಕುಮಾರ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಆ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಸ್ಫೋಟಕ ಸೇರಿದಂತೆ ಇತರ ಸಾಮಗ್ರಿಗಳನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಅದರ ತಪಾಸಣೆ ನಡೆಯಲಿದೆ.
ಮೈಸೂರಿನ ಲೋಕ ನಾಯಕ ನಗರದಲ್ಲಿ ಆರೋಪಿ ವಾಸವಾಗಿದ್ದ ಮನೆಯಲ್ಲಿ ಸೋಮವಾರ ಬೆಳಗ್ಗಿನ ಜಾವ ೪ ಗಂಟೆಯವರೆಗೂ ಪೊಲೀಸರು ಶೋಧ ನಡೆಸಿ ಮಹತ್ವದ ದಾಖಲೆ ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಐಎ ತಂಡದಿಂದ ಈ ಶೋಧ ನಡೆದಿದೆ.
ಬಾಡಿಗೆ ಮನೆಯಲ್ಲಿ ಸ್ಫೋಟಕ ತಯಾರಿಗೆ ಬೇಕಾದ ಕಚ್ಚಾವಸ್ತುಗಳು ಪತ್ತೆಯಾಗಿದ್ದು, ಮೈಸೂರು ಪೊಲೀಸ್ ಆಯುಕ್ತ ಬಿ ರಮೇಶ್ ನೇತೃತ್ವದಲ್ಲಿ ಅದನ್ನು ಮಂಗಳೂರಿಗೆ ಒಯ್ಯಲಾಗಿದೆ. ಶಂಕಿತನ ಜತೆ ಸಂಪರ್ಕದಲ್ಲಿದ್ದ ಒಬ್ಬ ವ್ಯಕ್ತಿ ಹಾಗೂ ಮನೆ ಮಾಲೀಕ ಮೋಹನ್ ಕುಮಾರ್ ಕೂಡಾ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಬಾಡಿಗೆ ಮನೆಯಲ್ಲಿ ಏನೇನು ಸಿಕ್ಕಿದೆ?
ಮಿಕ್ಸರ್ ಗ್ರೈಂಡರ್, ಗ್ಯಾಸ್ ಸಿಲಿಂಡರ್ ಸೇರಿ ಸ್ಫೋಟಕ ಸಾಮಾಗ್ರಿಗಳು ಮನೆಯಲ್ಲಿ ಸಿಕ್ಕಿವೆ. ಕೆಲ ಸ್ಪೋಟಕ ವಸ್ತುಗಳನ್ನು ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ಬಳಕೆಯಾಗುತ್ತಿತ್ತು ಎನ್ನಲಾಗಿದೆ. ಹಲವು ರೀತಿಯ ರಾಸಾಯನಿಕ ಪೌಡರ್ ಗಳು ಹಾಗೂ ಕಚ್ಚಾ ವಸ್ತುಗಳು ಇಲ್ಲಿ ದೊರೆತಿವೆ.
ಗುರುತು ಪತ್ತೆ ಮಾಡಲಿರುವ ಮೋಹನ್ ಕುಮಾರ್
ಬಾಡಿಗೆ ಮನೆ ಮಾಲೀಕ ಮೋಹನ್ ಕುಮಾರ್ ಅವರೂ ಮಂಗಳೂರಿಗೆ ಪ್ರಯಾಣಿಸಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ತಮ್ಮ ಮನೆಯಲ್ಲಿ ಇದ್ದವನೇ ಹೌದಾ ಎಂದು ಗುರುತುಪತ್ತೆ ಮಾಡಲಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಯಮತ್ತೂರು ಕಾರ್ ಬಾಂಬ್ ಸ್ಫೋಟಕ್ಕೂ ಮುನ್ನ ತಮಿಳುನಾಡಿಗೆ ಭೇಟಿ ನೀಡಿದ್ದ ಶಾರಿಕ್!