ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಜಾಲಗಳ ಬಗ್ಗೆ ಒಂದೆಡೆ ಜೋರಾಗಿ ಚರ್ಚೆ ನಡೆಯುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಇಷ್ಟು ದೊಡ್ಡ ಘಟನೆ ನಡೆದರೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಇನ್ನೂ ಮಂಗಳೂರಿಗೆ ಭೇಟಿ ನೀಡಿಲ್ಲ ಎನ್ನುವ ವಿಚಾರದಲ್ಲೂ ಚರ್ಚೆ ನಡೆಯುತ್ತಿದೆ. ಇದಕ್ಕೊಂದು ಅಂತ್ಯ ಹಾಡುವ ಉದ್ದೇಶದಿಂದಲೋ ಎಂಬಂತೆ ಅವರು ಬುಧವಾರ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ಶನಿವಾರ ಸಂಜೆ ೪.೩೦ರ ಹೊತ್ತಿಗೆ ಸ್ಫೋಟ ಸಂಭವಿಸಿದೆ. ಅದಾಗಿ ಮೂರು ದಿನ ಕಳೆದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳೂರಿಗೆ ಬಂದಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳ ಸಭೆ ಕರೆದಿಲ್ಲ. ಬೆಂಗಳೂರಿಗೂ ಹೋಗಿಲ್ಲ. ಕೇವಲ ತೀರ್ಥಹಳ್ಳಿಯಲ್ಲೇ ಉಳಿದು ಅಡಕೆ ಚುಕ್ಕಿ ರೋಗ, ಸ್ಥಳೀಯ ಕಾರ್ಯಕ್ರಮಗಳಲ್ಲೇ ಬ್ಯುಸಿ ಆಗಿದ್ದರು. ಇದು ಸಾಕಷ್ಟು ಜಿಜ್ಞಾಸೆಗಳಿಗೆ ಕಾರಣವಾಗಿತ್ತು.
ಇಷ್ಟು ದೊಡ್ಡ ಘಟನೆಯಾದಾಗ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸುವುದು, ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸುವುದು, ಕೇಂದ್ರ ಸರಕಾರದ ಜತೆ ಚರ್ಚಿಸುವುದು ಸೇರಿದಂತೆ ನಾನಾ ಕೆಲಸಗಳಿರುತ್ತವೆ. ಆದರೆ, ಇದ್ಯಾವುದರ ಬಗೆಗೂ ತಲೆ ಕೆಡಿಸಿಕೊಳ್ಳದೆ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಮನೆಯಲ್ಲೇ ಮೊಕ್ಕಾಂ ಹೂಡಿದ್ದರು ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ಈ ಸ್ಫೋಟ ಮತ್ತು ಉಗ್ರ ಚಟುವಟಿಕೆಯ ಕೇಂದ್ರ ಬಿಂದು ಅವರದೇ ಊರಾದ ತೀರ್ಥಹಳ್ಳಿ ಆಗಿರುವುದು. ತಮ್ಮ ನೆಲದಲ್ಲೇ ಇಂಥ ಘಟನೆಗಳ ಸ್ಕೆಚ್ ನಡೆಯುತ್ತಿದ್ದರೂ ಗೃಹ ಸಚಿವರ ಗಮನಕ್ಕೆ ಯಾಕೆ ಬಂದಿಲ್ಲ ಎನ್ನುವ ವಿಚಾರದಲ್ಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಭೇಟಿ
ಆರಗ ಜ್ಞಾನೇಂದ್ರ ಅವರು ಬುಧವಾರ ಮಂಗಳೂರಿಗೆ ಆಗಮಿಸಿ ಆಟೋ ಬಾಂಬ್ ಸ್ಫೋಟದಲ್ಲಿ ಗಾಯಾಳುವಾಗಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರನ್ನು ಭೇಟಿಯಾಗಿ ಕುಶಲ ವಿಚಾರಿಸಲಿದ್ದಾರೆ ಎನ್ನಲಾಗಿದೆ. ಇದೇ ಆಸ್ಪತ್ರೆಯಲ್ಲಿ ಶಾರಿಕ್ ಕೂಡಾ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯದ ಬಗ್ಗೆಯೂ ವೈದ್ಯರಿಂದ ಮಾಹಿತಿ ಪಡೆಯಲಿದ್ದಾರೆ ಇಬ್ಬರೂ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೃಹಸಚಿವರ ಜೊತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡಾ ಆಗಮಿಸುವ ಸಾಧ್ಯತೆ ಇದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್ ಬಾಂಬ್‌ಗೆ ಟೈಮರ್ ಫಿಕ್ಸ್ ಮಾಡಲು ಪಡೀಲ್‌ನಲ್ಲಿ ಇಳಿದನಾ ಉಗ್ರ ಶಾರಿಕ್?