ಮಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಶನಿವಾರ ಸಂಜೆ ಇಲ್ಲಿ ಸ್ಫೋಟ (ಮಂಗಳೂರು ಸ್ಫೋಟ) ಸಂಭವಿಸಿತ್ತು. ಇಲ್ಲಿವರೆಗೆ ತೀರ್ಥಹಳ್ಳಿಯಿಂದಲೇ ಮಾಹಿತಿ ಪಡೆಯುತ್ತಿದ್ದ ಸಚಿವರು ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿದರು. ಅವರು ಸ್ಫೋಟದ ರೂವಾರಿ, ಉಗ್ರ ಶಾರಿಕ್ ಮತ್ತು ಗಾಯಾಳು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.
ಕಂಕನಾಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪುರುಷೋತ್ತಮ್ ಕುಟುಂಬಸ್ಥರನ್ನು ಭೇಟಿಯಾದ ಅರಗ ಜ್ಞಾನೇಂದ್ರ ಅವರು ಎಲ್ಲರಿಗೂ ಧೈರ್ಯ ಹೇಳಿದರು. ವೈಯಕ್ತಿಕ ನೆಲೆಯಲ್ಲಿ 50,000 ಪರಿಹಾರ ನೀಡಿದರು. ಜತೆಗೆ ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಪುರುಷೋತ್ತಮ ಪೂಜಾರಿ ಅವರನ್ನು ಭೇಟಿ ಮಾಡಿ ಹೊರಬಂದ ವೇಳೆ ಮಾತನಾಡಿದ ಅವರು, ಅವರು ಔಟ್ ಆಫ್ ಡೇಂಜರ್ ಎಂದರು.
ಗೃಹ ಸಚಿವರು ಮಂಗಳೂರಿಗೆ ತಲುಪುವ ಹೊತ್ತಿಗೆ ಇತ್ತ ಡಿಜಿಪಿ ಪ್ರವೀಣ್ ಸೂದ್ ಅವರೂ ನಗರವನ್ನು ತಲುಪಿದ್ದರು. ಮೊದಲು ಘಟನೆ ನಡೆದ ನಾಗುರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗೃಹ ಸಚಿವರು ನೇರವಾಗಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಬಂದರು. ಅಲ್ಲಿ ಒಳಗೆ ಹೋಗುತ್ತಲೇ ಚಾಲಕ ಪುರುಷೋತ್ತಮ್ ಅವರನ್ನು ಮಾತ್ರ ನೋಡುತ್ತೇನೆ. ಶಾರಿಕ್‌ನನ್ನು ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಮಿಷನರ್ ಕಚೇರಿಯಲ್ಲಿ ಸಭೆ
ಆಸ್ಪತ್ರೆಯಿಂದ ನೇರವಾಗಿ ಮಂಗಳೂರು ಕಮಿಷನರ್ ಕಚೇರಿಗೆ ತೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಡಿಜಿಪಿ ಪ್ರವೀಣ್ ಸೂದ್, ಕಮಿಷನರ್ ಶಶಿಕುಮಾರ್, ಐಜಿಪಿ ಡಾ.ಚಂದ್ರಗುಪ್ತ, ಎಸ್ಪಿ ಋಷಿಕೇಶ್ ಸೋನಾವಣೆ ಸೇರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ಪಿ.ಐ.ಹೆಗಡೆ, ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಮಂಗಳೂರು ಡಿಸಿಪಿ ಅಂಶುಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಹೊಗೆ, ವೆಂಟಿಲೇಟರ್‌ನಲ್ಲಿ ವಿಶೇಷ ನಿಗಾ