ಮಂಗಳೂರು: ಮಂಗಳೂರು ಸ್ಫೋಟದ ರೂವಾರಿ (ಮಂಗಳೂರು ಸ್ಫೋಟ) ಮೊಹಮ್ಮದ್ ಶಾರಿಕ್ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಝಾಕೀರ್ ನಾಯ್ಕ್‌ನಿಂದ ಪ್ರಭಾವಿತನಾಗಿದ್ದ್ದನೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಶಾರಿಕ್ ಮೊಬೈಲ್‌ನಲ್ಲಿ ಝಾಕೀರ್ ನಾಯ್ಕ್ ಫೋಟೊ ಇತ್ತು. ಮತ್ತು ಭಾಷಣದ ತುಣುಕು ಕೂಡಾ ಇತ್ತು ಎಂದು ಹೇಳಲಾಗಿದೆ.
ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (IRF) ನಡೆಸುತ್ತಿದ್ದ ಝಾಕೀರ್ ನಾಯ್ಕ್ ಪೀಸ್ ಟಿವಿ ಮೂಲಕ ಇಸ್ಲಾಂ ಧರ್ಮದ ಶ್ರೇಷ್ಠತೆಯನ್ನು ಪ್ರಚಾರ ಮಾಡ್ತಾ ಇದ್ದ. ಈತನ ಭಾಷಣದ ಪ್ರಭಾವದಿಂದ ಹಲವಾರು ಮಂದಿ ಉಗ್ರರಾಗಿ ಬದಲಾಗಿದ್ದರು. ಈ ಹಿಂದೆ ಬಂಧಿತರಾದ ಹಲವು ಉಗ್ರರ ವಿಚಾರಣೆ ವೇಳೆ ಈ ವಿಚಾರ ಬಹಿರಂಗವಾಗಿದೆ. ಇದೀಗ ಶಾರಿಕ್ ಕೂಡಾ ಇಂತಹುದೇ ಭಾಷಣಗಳಿಂದ ಪ್ರಭಾವಿತನಾಗಿ ಉಗ್ರ ಹಾದಿ ಹಿಡಿದನೇ ಎನ್ನುವುದು ಮುಂದಿನ ತನಿಖೆ ವೇಳೆ ಬಯಲಾಗಲಿದೆ.
ಈ ನಡುವೆ ಮಂಗಳೂರು ಸ್ಫೋಟದ ಹೊಣೆ ಹೊತ್ತಿರುವ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಮತ್ತು ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್‌ಗೂ ಏನಾದರೂ ನಂಟು ಇದೆಯೇ ಎನ್ನುವ ಅನುಮಾನವೂ ಇದೆ. ಭಾರತದಿಂದ ಗಡಿಪಾರು ಮಾಡಿದ ಬಳಿಕ ಮಲೇಶ್ಯಾದಲ್ಲಿದ್ದ ಝಾಕೀರ್ ನಾಯ್ಕ್ ಯಾವ್ಯಾವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವ ಬಗ್ಗೆ ತನಿಖೆ ನಡೆಯಬೇಕಾಗಿದೆ.
ಎನ್‌ಐಎ ತನಿಖೆಗೆ ಅಧಿಕೃತ ಶಿಫಾರಸು
ಮಂಗಳೂರು ಆಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದೇಶ. ಗೃಹ ಇಲಾಖೆ ಎಸಿಎಸ್ ಅವರು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮಂಗಳೂರಿನ ಕಂಕನಾಡಿ ಠಾಣೆಯ ಅಪರಾಧ ಸಂಖ್ಯೆ 119/2022 ಪ್ರಕರಣ ಎನ್ಐಎ ತನಿಖೆಗೆ ವಹಿಸುವ ಬಗ್ಗೆ ಪತ್ರ ಎಂದು ಉಲ್ಲೇಖಿಸಿ ವಿವರ ನೀಡಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (UAPA) ತನಿಖೆಗೆ ಶಿಫಾರಸು ಮಾಡಿದ ಸರ್ಕಾರ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳು ಹಾಗೂ ಮಾಹಿತಿಗಳ ಆಧಾರದ ಮೇಲೆ ಎನ್ಐಎಗೆ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೂರು ದೇವಸ್ಥಾನ, ಮೂರು ಸಾರ್ವಜನಿಕ ಕಟ್ಟಡ: ಏನಿದು ಟೆರರ್ ಟಾರ್ಗೆಟ್?