Site icon Vistara News

ಮಂಗಳೂರು ಸ್ಫೋಟ | ಮೂರು ದೇವಸ್ಥಾನ, ಮೂರು ಸಾರ್ವಜನಿಕ ಕಟ್ಟಡ: ಏನಿದು ಟೆರರ್‌ ಟಾರ್ಗೆಟ್‌?

Shariq in ISIS

ಮಂಗಳೂರು: ನಾಗುರಿಯಲ್ಲಿ ನವೆಂಬರ್‌ ೧೯ರಂದು ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ (ಮಂಗಳೂರು ಸ್ಫೋಟ) ಸಂಬಂಧಿಸಿ ದಿನಕ್ಕೊಂದು ಹೊಸ ಮಾಹಿತಿಗಳು ಹರಿದುಬರುತ್ತಿವೆ. ರಾಜ್ಯ ಪೊಲೀಸರ ಜೊತೆ ಎನ್ಐಎ ಅಧಿಕಾರಿಗಳು ಕೂಡಾ ಈ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಕುಕ್ಕರ್‌ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ (ಐಆರ್‌ಸಿ) ಎಂಬ ಸಂಘಟನೆ ಹೊತ್ತುಕೊಂಡಿದೆ. ಡಾರ್ಕ್‌ ವೆಬ್‌ ಮೂಲಕ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದೊಂದು ಹೆಚ್ಚು ಪ್ರಚಾರದಲ್ಲಿಲ್ಲದ ಸಂಘಟನೆಯಾಗಿದೆ. ಆದರೆ, ಇದು ನೀಡಿರುವ ಮಾಹಿತಿ ಮಾತ್ರ ಬೆಚ್ಚಿಬೀಳಿಸುವಂತಿದೆ.

ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿರುವ ಐಆರ್‌ಸಿ ಇದನ್ನು ತಾನೇ ಮಾಡಿದ್ದಾಗಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ ಇನ್ನೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವನ್ನೂ ಉಲ್ಲೇಖಿಸಿ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಬೆದರಿಕೆ ಹಾಕಲಾಗಿದೆ.. ಆದರೆ ಇದು ಅಸಲಿ ಪೋಸ್ಟಾ ಅಥವಾ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಮಾಡಿರೋ ಪೋಸ್ಟಾ ಅನ್ನುವುದು ಗೊತ್ತಾಗಿಲ್ಲ. ಆದರೆ ಈ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಾ ಇದ್ದಾರೆ.

ಮಾಹಿತಿಯ ಪ್ರಕಾರ, ಉಗ್ರರು ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ಪ್ರಧಾನ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಡಾರ್ಕ್‌ವೆಬ್‌ ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ನಮ್ಮ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿರುವುದು ದೇಶದಲ್ಲಿ ಇನ್ನಷ್ಟು ಸ್ಫೋಟಗಳನ್ನು ನಡೆಸಲಿದೆಯಾ ಎನ್ನುವ ಅನುಮಾನ ಮೂಡಿಸಿದೆ.

ಅಲ್ಲದೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸ್ಫೋಟ ಒಂದು ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಉಗ್ರರ ಟಾರ್ಗೆಟ್ ಮಂಗಳಾದೇವಿ , ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಕೂಡಾ ಆಗಿತ್ತು ಎನ್ನುವ ವಿಚಾರವೂ ಬಯಲಾಗಿದೆ. ಇದರ ಜತೆಗೆ ಮಂಗಳೂರಿನ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಆರೆಸ್ಸೆಸ್‌ ಸಂಘಟನೆಯ ಪ್ರಧಾನ ಕೇಂದ್ರವಾಗಿರುವ ಸಂಘ ನಿಕೇತನವನ್ನೂ ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಲಾಗಿದೆ.

ನವೆಂಬರ್ 19ರಂದು ಬ್ಲಾಸ್ಟ್ ನಡೆಯೋ ಹಿಂದಿನ ಅಂದರೆ ನವೆಂಬರ್ 18ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾಡುಗಳ ನಡುವೆ ಸೆಟಲೈಟ್ ಫೋನ್ ಕಾರ್ಯಾಚರಣೆ ಮಾಡಿದೆ. ಆ ಸೆಟಲೈಟ್ ಫೋನ್‌ಗಳಿಗೂ ಶಾರಿಕ್‌ ನಡೆಸಿರುವ ಸ್ಫೋಟದ ಸಂಚಿಗೂ ನಂಟಿದೆಯಾ ಅನ್ನೋ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಾರಿಕ್ ಸದ್ಯ ಆಸ್ಪತ್ರೆಯಲ್ಲಿದ್ದು ಮಾತನಾಡುವ ಸ್ಥಿತಿಯಲ್ಲ ಇಲ್ಲ. ಹಾಗಂತ ಪೊಲೀಸರು ಹಾಗೂ ಎನ್ಐಎ ತನಿಖೆಯನ್ನು ಮುಂದುವರೆಸಿದೆ. ತನಿಖೆಯಲ್ಲಿ ಹಲವು ಸ್ಫೋಟಕ ವಿಚಾರಗಳು ಬಹಿರಂಗವಾಗುತ್ತಿದೆ. ಶಾರಿಕ್ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಷನ್‌ನ ಫೋಟೊ ಇದ್ದಿದ್ದಕ್ಕೂ, ಶಿವ ಕ್ಷೇತ್ರದಲ್ಲಿ ಸ್ಫೋಟದ ಉದ್ದೇಶ ಇತ್ತು ಅನ್ನೋದಕ್ಕೂ ಸಂಬಂಧ ಇರಬಹುದು ಅನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ: ಕುಕ್ಕರ್‌ ಬಾಂಬ್‌ ಸ್ಫೋಟ ತನಿಖೆಯನ್ನು NIAಗೆ ವಹಿಸಲು ನಿರ್ಧಾರ

Exit mobile version