Site icon Vistara News

ಮಂಗಳೂರು ಸ್ಫೋಟ | ಕದ್ರಿ ದೇವಸ್ಥಾನವೇ ಉಗ್ರರ ಟಾರ್ಗೆಟ್‌: ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು

Kadri temple

ಮಂಗಳೂರು: ನವೆಂಬರ್‌ ೧೯ರಂದು ಸಂಜೆ ನಾಗುರಿಯಲ್ಲಿ ಸ್ಫೋಟಗೊಂಡ (ಮಂಗಳೂರು ಸ್ಫೋಟ) ಕುಕ್ಕರ್‌ ಬಾಂಬ್‌ನ ಟಾರ್ಗೆಟ್‌ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಆಗಿತ್ತು ಎಂಬ ವಿಚಾರ ಈಗ ಮಂಗಳೂರಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕದ್ರಿ ದೇವಸ್ಥಾನದ ಆಡಳಿತ ಮಂಡಳಿ ಕೂಡಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದೆ.

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಆಗಿರುವ ಜಯಮ್ಮ ಅವರು ಜಾಲತಾಣಗಳಲ್ಲಿ ಬಂದಿರುವ ವರದಿಗಳನ್ನು ಆಧರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ʻʻಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಕದ್ರಿ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಹಾಕಿದೆ ಎಂಬ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕುʼʼ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿದ ಕದ್ರಿ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಮುಂದೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದೆ.

ಮಾಹಿತಿಯ ಪ್ರಕಾರ, ಉಗ್ರರು ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ಪ್ರಧಾನ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಡಾರ್ಕ್‌ವೆಬ್‌ ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ನಮ್ಮ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿರುವುದು ದೇಶದಲ್ಲಿ ಇನ್ನಷ್ಟು ಸ್ಫೋಟಗಳನ್ನು ನಡೆಸಲಿದೆಯಾ ಎನ್ನುವ ಅನುಮಾನ ಮೂಡಿಸಿದೆ.

ಅಲ್ಲದೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸ್ಫೋಟ ಒಂದು ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಉಗ್ರರ ಟಾರ್ಗೆಟ್ ಮಂಗಳಾದೇವಿ , ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಕೂಡಾ ಆಗಿತ್ತು ಎನ್ನುವ ವಿಚಾರವೂ ಬಯಲಾಗಿದೆ. ಇದರ ಜತೆಗೆ ಮಂಗಳೂರಿನ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಆರೆಸ್ಸೆಸ್‌ ಸಂಘಟನೆಯ ಪ್ರಧಾನ ಕೇಂದ್ರವಾಗಿರುವ ಸಂಘ ನಿಕೇತನವನ್ನೂ ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್‌ ಮೇಲೆ ಝಾಕಿರ್‌ ನಾಯ್ಕ್‌ ಭಾಷಣಗಳ ಪ್ರಭಾವ? ಮೊಬೈಲ್‌ನಲ್ಲಿ ಸಿಕ್ತು ಕ್ಲೂ

Exit mobile version