Site icon Vistara News

ಮಂಗಳೂರು ಸ್ಫೋಟ | ಶಾರಿಕ್‌ಗೆ ಐಸಿಸ್‌ ಸಂಪರ್ಕ ಸಾಬೀತು: ಐಸಿಸ್‌ ದಿರಸು ಹಾಕಿ ಕುಕ್ಕರ್‌ ಹಿಡಿದುಕೊಂಡ ಫೋಟೊ ಔಟ್‌

Shariq in ISIS

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿ ಶಾರಿಕ್‌ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್‌ ಜತೆಗೆ ಸಂಬಂಧ ಹೊಂದಿರುವುದು ಕೂಡಾ ಬಯಲಾಗಿದೆ. ಕಳೆದ ಆಗಸ್ಟ್‌ ೨೦ರಿಂದ ಕಣ್ಮರೆಯಾಗಿರುವ ಶಾರಿಕ್‌ ಹಲವು ಉಗ್ರ ಕೃತ್ಯಗಳಲ್ಲಿ ಭಾಗವಹಿಸಿದ್ದ ಎನ್ನುವುದು ಈ ಹಿಂದೆಯೇ ಬಯಲಾಗಿತ್ತು. ಆತ ಕೊಯಮತ್ತೂರು ಬಾಂಬ್‌ ಸ್ಫೋಟದಲ್ಲಿ ಶಾಮೀಲಾಗಿರುವ ಬಗ್ಗೆಯೂ ಮಾಹಿತಿಗಳು ದೊರೆತಿವೆ. ಇದರ ನಡುವೆಯೇ ಶಾರಿಕ್‌ನ ಐಸಿಸ್‌ ವೇಷದ ಫೋಟೊ ಬಯಲಾಗಿದ್ದು, ಆತನ ಐಸಿಸ್‌ ಸಂಪರ್ಕವೂ ಹೊರಬಿದ್ದಿದೆ.

ಈ ಚಿತ್ರದಲ್ಲಿ ಆತ ಕುಕ್ಕರ್‌ ಒಂದನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ತಲೆಯ ಮೇಲೆ ಐಸಿಸ್‌ ಉಗ್ರರು ಧರಿಸುವಂತೆ ಶಿರವಸ್ತ್ರ ಹಾಕಿಕೊಂಡಿದ್ದಾನೆ. ಈ ಹಿಂದಿನಿಂದಲೂ ಈತನಿಗೆ ಐಸಿಸ್‌ ಜತೆಗೆ ಸಂಪರ್ಕವಿರುವ ಬಗ್ಗೆ ಸಂಶಯವಿತ್ತು. ಈಗ ಅದು ದೃಢಪಟ್ಟಿದೆ.

ಎರಡು ವರ್ಷದ ಹಿಂದೆ ಬಂಧನವಾಗಿತ್ತು!
ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿ ೨೦೨೦ರ ನವೆಂಬರ್‌ನಲ್ಲಿ ಶಾರಿಕ್‌ ಬಂಧನವಾಗಿತ್ತು. ಜತೆಗೆ ಮಾಜ್‌ ಮುನೀರ್‌ ಅಹಮದ್‌ ಕೂಡಾ ಸಿಕ್ಕಿಬಿದ್ದಿದ್ದ.

ನವೆಂಬರ್‌ ೨೭ರ ಮುಂಜಾನೆ ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್‌ ರಸ್ತೆಯ ಹಳೆ ಪೊಲೀಸ್‌ ಔಟ್‌ ಪೋಸ್ಟ್‌ನ ಗೋಡೆಯಲ್ಲಿ ಲಷ್ಕರ್‌ ತಯ್ಬಾ ಮತ್ತು ತಾಲಿಬಾನ್‌ ಪರವಾಗಿ ಗೋಡೆಬರಹ ಬರೆದಿದ್ದರು. ಅದಕ್ಕಿಂತ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದರು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್‌ ಲೊಕೇಶನ್‌ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆಗ ಮಾಜ್‌ ಮುನೀರ್‌ ಅಹ್ಮದ್‌ ಎಂಟೆಕ್‌ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾರೀಕ್‌ ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜತೆಗೆ ಫುಡ್‌ ಡೆಲಿವರಿ ಸೇವೆಯಲ್ಲೂ ಇರುತ್ತಿದ್ದ. ಆಗಾಗ ಮಂಗಳೂರಿಗೆ ಬಂದು ಮಾಝ್‌ನನ್ನು ಭೇಟಿಯಾಗುತ್ತಿದ್ದ.

ಏನು ಬರೆಯಲಾಗಿತ್ತು?
ಲಷ್ಕರ್‌ ಜಿಂದಾಬಾದ್‌ ಎಂಬ ಹ್ಯಾಷ್‌ ಟ್ಯಾಗ್‌ ಹಾಕಿ ʻಸಂಘಿಗಳೇ ನಿಮ್ಮದು ಅತಿಯಾದರೆ ಲಷ್ಕರೆ ತಯ್ಬಾ ಮತ್ತು ತಾಲಿಬಾನ್‌ ಬರಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಬರಹ ಉರ್ದುವಿನಲ್ಲಿತ್ತು.
ಅಂದು ರಾಷ್ಟ್ರೀಯ ತನಿಖಾ ದಳವೇ ದಿಲ್ಲಿಯಿಂದ ಬಂದು ಇಲ್ಲಿ ತನಿಖೆಯನ್ನು ನಡೆಸಿತ್ತು. ಈ ಇಬ್ಬರು ವ್ಯಕ್ತಿಗಳಿಗೆ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂಬ ಮಾಹಿತಿಯನ್ನು ಅಂದೂ ನೀಡಲಾಗಿತ್ತು. ಆದರೆ, ಅಚ್ಚರಿ ಎಂದರೆ, ಇದೇ ವ್ಯಕ್ತಿಗಳಿಗೆ ಕೋರ್ಟ್‌ ೨೦೨೧ರ ಸೆಪ್ಟೆಂಬರ್‌ ೮ರಂದು ಕೋರ್ಟ್‌ ಜಾಮೀನು ನೀಡಿತ್ತು. ಅಲ್ಲಿಂದ ಆತ ಉಗ್ರ ಕೃತ್ಯಗಳನ್ನು ಮುಂದುವರಿಸಿದ್ದ.

ಈ ರೀತಿ ಲಷ್ಕರೆ ತಯ್ಬಾ ಹೆಸರು ಹೇಳಿ ಆತ ಬೆದರಿಸಿರುವುದು ಆತ ದೊಡ್ಡ ಮಟ್ಟದ ಸಂಘಟನೆಗಳಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿತ್ತು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಯೆಸ್‌ ಇವನೇ ತೀರ್ಥಹಳ್ಳಿ ಮೂಲದ ಉಗ್ರ ಶಾರಿಕ್‌: ಎಡಿಜಿಪಿ ಅಲೋಕ್‌ ಕುಮಾರ್‌ ಬಹಿರಂಗ

Exit mobile version