ಹುಬ್ಬಳ್ಳಿ: ಮಂಗಳೂರಿನ ಹೊರ ವಲಯದ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಮಗನಿಗೂ ಇದಕ್ಕೂ ಸಂಬಂಧ ಇಲ್ಲ. ಆತ ಪ್ರತಿಭಾವಂತ, ಅವನ ಆಧಾರ್ ಕಾರ್ಡ್ ಕಳೆದುಹೋಗಿತ್ತು ಎಂದು ಹುಬ್ಬಳ್ಳಿಯ ಪ್ರೇಮರಾಜ್ ಹುಟಗಿ ತಾಯಿ ರೇಣುಕಾ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯ ಪ್ರೇಮ್‌ರಾಜ್ ನಿವಾಸದಲ್ಲಿ ಅವರ ತಾಯಿ ರೇಣುಕಾ ಅವರನ್ನು ವಿಸ್ತಾರ ನ್ಯೂಸ್ ಮಾತನಾಡಿಸಿದ್ದು, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನು ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಆಗ ನಾನು ದೂರು ಕೊಡುವಂತೆ ಸಲಹೆ ಕೊಟ್ಟಿದ್ದೆ. ಈಗ ಅವನು ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಯೂ ಸಹ ಆತನ ವಿಚಾರಣೆ ನಡೆದಿದೆ. ಪೊಲೀಸರು ಕೇಳಿದ ಎಲ್ಲ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಹುಟ್ಟುಹಬ್ಬ ಇತ್ತು
ಪೊಲೀಸರು ನಮ್ಮ ಮನೆಗೂ ಬಂದು ವಿಚಾರಣೆ ನಡೆಸಿದ್ದಾರೆ. ನಿನ್ನೆ (ಶನಿವಾರ) ಮಗ ಪ್ರೇಮ್‌ರಾಜ್‌ನ ಹುಟ್ಟುಹಬ್ಬ ಇತ್ತು. ಅದೇ ದಿನ ಇಂತಹ ಘಟನೆ ನಡೆದಿದೆ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ | Mangalore Blast | 2 ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದ ಪ್ರೇಮ್ ರಾಜ್; ತನ್ನ ಪಾತ್ರವಿಲ್ಲವೆಂದು ತುಮಕೂರು ಎಸ್ಪಿಗೆ ಹೇಳಿಕೆ
ನನ್ನ ತಮ್ಮ ಗೋಲ್ಡ್ ಮೆಡಲ್ ವಿದ್ಯಾರ್ಥಿ
ನನ್ನ ತಮ್ಮ ರೈಲ್ವೆ ಡಿ ಗ್ರೂಪ್ ನೌಕರನಾಗಿದ್ದು, ಟ್ರಕ್ ಮೇಂಟೇನ್ ಕೆಲಸ ಮಾಡುತ್ತಿದ್ದಾನೆ. ಆತ ಗೋಲ್ಡ್ ಮೆಡಲ್ ವಿದ್ಯಾರ್ಥಿಯಾಗಿದ್ದಾನೆ. ಅವನಿಗೆ ಏನೂ ಆಗುವುದಿಲ್ಲ. ಅವನು ಈ ಪ್ರಕರಣದ ಎಲ್ಲ ಮಾಹಿತಿ ಪೊಲೀಸರಿಗೆ ನೀಡಿದ್ದಾನೆ ಎಂದು ಪ್ರೇಮರಾಜ್ ಸಹೋದರ ಲವರಾಜ್ ಪ್ರತಿಕ್ರಿಯೆ ನೀಡಿದರು.
ಮಗನ ಆಧಾರ್ ಕಾರ್ಡ್ ದುರುಪಯೋಗವಾಗಿದೆ- ತಂದೆ
ಪ್ರೇಮರಾಜ್ ಆಧಾರ್ ಕಾರ್ಡ್ ಆರು ತಿಂಗಳ ಹಿಂದೆ ಕಳೆದಿತ್ತು. ಆಧಾರ್ ಕಾರ್ಡ್ ದುರುಪಯೋಗ ಮಾಡಲಾಗಿದೆ. ಪೊಲೀಸರು ಶನಿವಾರ ಬಂದು ವಿಚಾರಣೆ ಮಾಡಿದ್ದಾರೆ. ಅವರಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ತುಮಕೂರಿನಲ್ಲಿ ಪ್ರೇಮ್‌ರಾಜ್ ಇದ್ದು, ಅಲ್ಲಿಯೂ ವಿಚಾರಣೆ ಮಾಡಿದ್ದಾರೆ ಎಂದು ಪ್ರೇಮ್‌ರಾಜ್ ತಂದೆ ಮಾರುತಿ ತಿಳಿಸಿದರು.
ಇದನ್ನೂ ಓದಿ | Mangalore Blast | ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ; ಉಗ್ರ ಕೃತ್ಯ ಆಯಾಮದಲ್ಲಿ ಪರಿಶೀಲನೆ