ಉಳ್ಳಾಲ (ಮಂಗಳೂರು): ಕೊಣಾಜೆ ನಡುಪದವಿನ ಪಿಎ ಎಂಜಿನಿಯರಿಂಗ್ ಕಾಲೇಜಿಗೆ ಗುರುವಾರ ಎನ್‌ಐಎ ತಂಡ ದಾಳಿ ನಡೆಸಿದ್ದು, ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬನನ್ನು (ಮಂಗಳೂರು ಸ್ಫೋಟ) ವಶಕ್ಕೆ ಪಡೆದುಕೊಂಡಿದೆ.
ಈ ಹಿಂದಿನ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿ ಬಂಧಿತನಾಗಿದ್ದ ಶಂಕಿತ ಉಗ್ರ ಮಾಝ್ ಮುನೀರ್ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈ ಬಂಧನ ನಡೆದಿದೆ. ಉಡುಪಿ ಮೂಲದ ರಿಹಾನ್ ಶೇಖ್‌ನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಆತನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿಯಾಗಿರುವ ಮೊಹಮ್ಮದ್ ಶಾರಿಕ್ ಜತೆ ಸೇರಿ ಶಿವಮೊಗ್ಗದ ಮೊಹಮ್ಮದ್ ಯಾಸಿನ್ ಮತ್ತು ಮಂಗಳೂರಿನ ಮಾಝ್ ಮುನೀರ್ ಹಲವು ಕುಕೃತ್ಯಗಳನ್ನು ನಡೆಸಿದ್ದರು. ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹಗಳನ್ನು ಬರೆದಿದ್ದರು. ಅದರ ಜತೆಗೆ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರ, ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕವನ್ನು ಸ್ಪೋಟಿಸುತ್ತಿದ್ದರು.
ಈ ಪ್ರಕರಣದಲ್ಲಿ ಈಗಾಗಲೇ ಮಾಜ್ ಮುನೀರ್ ಮತ್ತು ಮೊಹಮ್ಮದ್ ಯಾಸಿನ್‌ನನ್ನು ಬಂಧಿಸಲಾಗಿದ್ದರೆ, ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಸಿಕ್ಕಿಬಿದ್ದಿದ್ದ. ಇಂಥ ಉಗ್ರ ಕೃತ್ಯಗಳಲ್ಲಿ ಈ ದುಷ್ಟರ ಜತೆ ಇನ್ನೂ ಕೆಲವರು ಭಾಗಿಯಾಗಿರುವ ಬಗ್ಗೆ ಸಂಶಯಗಳಿದ್ದವು.
ಇದೀಗ ಮಂಗಳೂರಿನಲ್ಲಿ ಎಂಜಿನಿಯರಿಂಗ್ ಓದಿದ್ದ ಮಾಜ್ ಮುನೀರ್ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ರಿಹಾನ್ ಶೇಖ್‌ನನ್ನು ಎನ್‌ಐಎ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಿಹಾನ್ ಶೇಖ್ ಈ ಉಗ್ರರ ಜತೆಗೆ ಹೇಗೆ ಶಾಮೀಲಾಗಿದ್ದಾನೆ, ಯಾವೆಲ್ಲ ಕೃತ್ಯಗಳಲ್ಲಿ ಜತೆಯಾಗಿದ್ದಾನೆ ಎನ್ನುವ ವಿಚಾರವನ್ನು ತನಿಖೆ ಮಾಡಬೇಕಾಗಿದೆ. ಎನ್‌ಐಎ ಪೊಲೀಸರಿಗೆ ಕೆಲವೊಂದು ಮಹತ್ವದ ವಿಚಾರಗಳು ತಿಳಿದ ನಂತರವಷ್ಟೇ ಈತನನ್ನು ವಶಕ್ಕೆ ಪಡೆದಿರುತ್ತಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | 15 ಕುಕ್ಕರ್ ಬಾಂಬ್‌ಗೆ ರೆಡಿ ಮಾಡಿದ್ದ ಶಾರಿಕ್: ಮಾಜ್, ಯಾಸಿನ್ ಕೂಡಾ ಸದ್ಯವೇ ಎನ್‌ಎಐ ಕಸ್ಟಡಿಗೆ