Site icon Vistara News

Mangalore Blast : NIA ತಂಡದಿಂದ ಶಿವಮೊಗ್ಗದಲ್ಲಿ ಮಹಜರು, ಯಾಸೀನ್‌ ಸಂಬಂಧಿ ಮನೆಯಲ್ಲಿ ಸಿಕ್ತು ಸ್ಫೋಟಕ!

Maz yasin Shariq terror

ಶಿವಮೊಗ್ಗ: ಮಂಗಳೂರಿನಲ್ಲಿ ಕಳೆದ ವರ್ಷದ ನವೆಂಬರ್‌ 19ರಂದು ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ (Mangalore Blast) ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (National Investigation Agency- NIA) ಶಿವಮೊಗ್ಗದಲ್ಲಿ ಕೂಡಾ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ. ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ನಲ್ಲಿ (Cooker Bomb Blast) ಮೊಹಮ್ಮದ್‌ ಶಾರೀಕ್‌ ಪ್ರಧಾನ ಆರೋಪಿಯಾಗಿದ್ದರೆ ಆತನಿಗೆ ಬೇರೆ ಬೇರೆ ಹಂತಗಳಲ್ಲಿ ಸಹಕಾರ ನೀಡಿದ ಮೊಹಮ್ಮದ್‌ ಯಾಸಿನ್‌, ಮಹಮ್ಮದ್‌ ಮಾಜ್‌ ಅವರನ್ನೂ ತೀವ್ರ ವಿಚಾರಣೆಗೆ (Investigation in Shivamogga) ಒಳಪಡಿಸಲಾಗುತ್ತಿದೆ.

ನಾಲ್ಕು ದಿನಗಳ ಹಿಂದೆ ಎನ್‌ಐಎ ಮೊಹಮ್ಮದ್‌ ಯಾಸೀನ್‌ನನ್ನು ಶಿವಮೊಗ್ಗಕ್ಕೆ ಕರೆ ತಂದು ಸ್ಥಳ ಮಹಜರು ನಡೆಸಿದೆ. ಯಾಸೀನ್‌ನ ಮನೆ ಮತ್ತು ಸಂಬಂಧಿಕರ ಮನೆಗಳಲ್ಲಿ ಯಾಸೀನ್‌ನನ್ನು ಮುಂದಿಟ್ಟುಕೊಂಡು ಶೋಧ ನಡೆಸಲಾಗಿದೆ. ಯಾಸೀನ್‌ ಶಿವಮೊಗ್ಗ ನಗರದ ನಿವಾಸಿಯಾಗಿದ್ದಾನೆ. ಈ ಶೋಧ ಕಾರ್ಯದ ವೇಳೆ ಯಾಸೀನ್‌ ಸಂಬಂಧಿ ಮನೆಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಅದನ್ನು ಎನ್‌ಐಎ ವಶಪಡಿಸಿಕೊಂಡಿದೆ.

ಶಿವಮೊಗ್ಗ ಹೊರವಲಯದ ಚಿಕ್ಕಲ್‌ನಲ್ಲಿ ಯಾಸೀನ್‌ ಸಂಬಂಧಿ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಸ್ಫೋಟಕ ವಸ್ತು ಲಭ್ಯವಾಗಿದೆ ಎಂದು ಹೇಳಲಾಗಿದೆ.

ಮಂಗಳೂರು ಕುಕ್ಕರ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ಶಾರೀಕ್, ಮಾಜ್ ಮುನೀರ್ ಮತ್ತು ಯಾಸಿನ್‌ ರಹಸ್ಯ ಭೇಟಿ ಮಾಡಿದ್ದರು ಎಂದು ಹೇಳಲಾದ ಸ್ಥಳದಲ್ಲೂ ಮಹಜರು ನಡೆಸಲಾಗಿದೆ. ಈ ಆರೋಪಿಗಳು ಶಿವಮೊಗ್ಗದ ತುಂಗಾ ನದಿಯ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಶಿವಮೊಗ್ಗದಲ್ಲಿ ಕಳೆದ 2022ರ ಆಗಸ್ಟ್‌ 15ರಂದು ನಡೆದ ಸಾವರ್ಕರ್‌ ಫ್ಲೆಕ್ಸ್‌ ಗಲಾಟೆ ಸಂದರ್ಭದಲ್ಲಿ ಹಿಂದು ವ್ಯಾಪಾರಿಯೊಬ್ಬರಿಗೆ ಚೂರಿಯಿಂದ ಇರಿಯಲಾಗಿತ್ತು. ಆ ಸಂದರ್ಭದಲ್ಲಿ ಬಂಧಿತನಾದ ಜಬಿಯುಲ್ಲಾ ಎಂಬಾತ ನೀಡಿದ ಮಾಹಿತಿಯಂತೆ ಶಿವಮೊಗ್ಗ ಟೆರರ್‌ ಚಟುವಟಿಕೆಗಳು ಬಯಲಿಗೆ ಬಂದಿದ್ದವು. ಆದರೆ, ಅಷ್ಟು ಹೊತ್ತಿಗೆ ಶಾರೀಕ್‌ ಪರಾರಿಯಾಗಿದ್ದ. ಉಳಿದಂತೆ ಯಾಸಿನ್‌ ಮತ್ತು ಮಾಜ್‌ ಮುನೀರ್‌ ಬಂಧಿತರಾಗಿದ್ದರು.

ಈ ನಡುವೆ, ತಲೆಮರೆಸಿಕೊಂಡಿದ್ದ ಮೊಹಮ್ಮದ್‌ ಶಾರೀಕ್‌ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಲು ಮುಂದಾದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಬಳಿಕ ಎಲ್ಲ ಉಗ್ರರನ್ನು ಸೇರಿಸಿಕೊಂಡು ತನಿಖೆಗೆ ಮುಂದಾಗಿತ್ತು.

4 ದಿನಗಳ ಹಿಂದೆ ಆರೋಪಿ ಯಾಸಿನ್‌ನನ್ನು ಹಿಡಿದುಕೊಂಡು ಬಂದ ಎನ್‌ಐಎ ಇನ್‌ಸ್ಪೆಕ್ಟರ್ ಮಹೇಶ್, ಇತರೆ ಇಬ್ಬರು ಅಧಿಕಾರಿಗಳು ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಶಿವಮೊಗ್ಗ ಭೇಟಿ ವೇಳೆ ಫೈಜಲ್ ಎಂಬುವನಿಂದ  10 ಸಾವಿರ ಕ್ರಿಪ್ಟೋಕರೆನ್ಸಿ ವಶಪಡಿಸಲಾಗಿದೆ.

ಈ ಎಲ್ಲ ಉಗ್ರ ಚಟುವಟಿಕೆಗಳ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿರುವನು ಶಾರಿಕ್‌ನ ಮನೆ ಇರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿಯೇ ಆಗಿರುವ ಮತೀನ್‌ ಖಾನ್‌. ಇವರಿಗೆ ಹಣಕಾಸು ಸಹಾಯ ಮಾಡಿದ್ದು ಅರಾಫತ್. ಆದರೆ, ಅರಾಫತ್, ಮತೀನ್ ಈ ಪ್ರಕರಣದಲ್ಲಿ ಇನ್ನೂ ಪತ್ತೆಯಾಗಿಲ್ಲ. ಇವರಿಬ್ಬರೂ ಇಬ್ಬರೂ ಹೊರದೇಶದಲ್ಲಿರುವ ಮಾಹಿತಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: Terrorists in Bengaluru : ಕಿರಾತಕರಿಗೆ ಲಷ್ಕರ್‌ ನಂಟು; ಇವರ ಹಿಂದಿದ್ದಾನೆ 2008ರ ‌Bangalore Blast ಕಿಂಗ್‌ಪಿನ್

Exit mobile version