ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ್ದು ನಿಜ. ಆದರೆ, ಅದರ ತೀವ್ರತೆ ಕಡಿಮೆಯಾಗಿತ್ತು ಮತ್ತು ಈ ಸ್ಫೋಟದ ಮೂಲಕ ಒಬ್ಬ ದೊಡ್ಡ ದೇಶದ್ರೋಹಿ ಉಗ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿಜವೆಂದರೆ, ಒಂದೊಮ್ಮೆ ಕುಕ್ಕರ್ ಬಾಂಬ್ ಅದರ ನಿಜವಾದ ಶಕ್ತಿಯಿಂದ ಸ್ಫೋಟಿಸಿದ್ದರೆ ರಿಕ್ಷಾ ಸಂಪೂರ್ಣ ಚಿಂದಿಯಾಗುತ್ತಿತ್ತು. ಅದರ ಚಾಲಕರ ಜೀವಕ್ಕೂ ಅಪಾಯವಾಗುತ್ತಿತ್ತು. ಬೇರೆ ಅನಾಹುತಗಳೂ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದ್ಯಾವುದೂ ಆಗದೆ ಒಂದು ಸಣ್ಣ ಸ್ಫೋಟದೊಂದಿಗೆ ಹಲವರ ಜೀವ ಉಳಿಯುವಂತಾಗಿದೆ. ಹಾಗಂತ, ದುಷ್ಟನೊಬ್ಬನನ್ನು ಕಾನೂನಿನ ಕೈಗೆ ಒಪ್ಪಿಸುವ ಕೆಲಸವನ್ನು ಮಾಡಿದೆ.
ಹಾಗಿದ್ದರೆ, ದೊಡ್ಡ ದುರಂತವೊಂದನ್ನು ಸಣ್ಣದರಲ್ಲಿ ಮುಗಿಸಿದ, ಯಾವುದೇ ಜೀವ ಹಾನಿಯಾಗದಂತೆ ನೋಡಿಕೊಂಡ, ಆರೋಪಿಯನ್ನು ಕಾನೂನಿನ ಬಲೆಗೆ ಸಿಲುಕುವಂತೆ ಮಾಡಿದ ಶಕ್ತಿ ಯಾವುದು ಎನ್ನುವುದರ ಬಗ್ಗೆ ಕರಾವಳಿಯಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ನೀಡುವ ಉತ್ತರ: ಕಂಕನಾಡಿಯ ಶ್ರೀ ಬ್ರಹ್ಮ ದೈವರ್ಕಳ ಗರೋಡಿಯಲ್ಲಿ ನೆಲೆ ನಿಂತಿರುವ ಅವಳಿ ವೀರರಾದ ಕೋಟಿ ಚೆನ್ನಯರು.
ಹೌದು, ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ದೊಡ್ಡ ಮಟ್ಟದಲ್ಲಿ ಹೊಗೆ ಸೃಷ್ಟಿಯಾಗಿ ಭಯಾನಕ ವಾತಾವರಣ ಸೃಷ್ಟಿಯಾಗಿತ್ತು. ಈ ರೀತಿ ಅವಘಡ ಸಂಭವಿಸಿದ ಜಾಗ ಇರುವುದು ಮಂಗಳೂರಿನ ಕಂಕನಾಡಿಯ ಬ್ರಹ್ಮ ಬೈದರ್ಕಳ ಗರೋಡಿಯಿಂದ ಕೇವಲ ೨೦೦ ಮೀಟರ್ ಅಂತರದಲ್ಲಿ. ಹಾಗಾಗಿ ಇಲ್ಲಿನ ದೈವಗಳೇ ದೊಡ್ಡ ಅನಾಹುತವನ್ನು ತಪ್ಪಿಸಿದವು ಎನ್ನುವುದು ಜನರ ನಂಬಿಕೆ.
ಕೋಟಿ ಚೆನ್ನಯರು ತುಳುನಾಡಿನ ಅವಳಿ ಪವಾಡ ಪುರುಷರು. ಶಕ್ತಿಶಾಲಿಗಳಾಗಿದ್ದ ಈ ಬಿರುವ ವೀರರು ಅನ್ಯಾಯದ ವಿರುದ್ಧ ಹೋರಾಟ ಮಾಡಿ ಮಡಿದು ದೈವತ್ವವನ್ನು ಪಡೆದವರು. ಇವತ್ತಿವಗೂ ಅಧರ್ಮದ ಹಾದಿಯಲ್ಲಿ ಸಾಗುವವರಿಗೆ ಶಿಕ್ಷೆ ನೀಡುತ್ತಾ, ಧರ್ಮಿಷ್ಠರನ್ನು ರಕ್ಷಿಸುತ್ತಾರೆ ಎನ್ನುವ ನಂಬಿಕೆ ಇದೆ. ಇದೇ ನಂಬಿಕೆಯಲ್ಲಿ ಕರಾವಳಿಯಲ್ಲಿ ಗರೋಡಿಗಳನ್ನು ಕಟ್ಟಿ ಆರಾಧಿಸಲಾಗುತ್ತಿದೆ. ಮಂಗಳೂರಿನ ಕಂಕನಾಡಿ ಗರೋಡಿ ಎನ್ನುವುದು ಅತ್ಯಂತ ಪ್ರಸಿದ್ಧ ಮತ್ತು ಹಲವು ಕಾರಣಿಕಗಳಿಗೆ ಹೆಸರಾಗಿದೆ.
ಕರಾವಳಿಗರು ಈ ದಾರಿಯಲ್ಲಿ ಸಾಗುವಾಗ ಅವಳಿ ವೀರರಿಗೆ ನಮಸ್ಕರಿಸಿಯೇ ಮುಂದುವರಿಯುತ್ತಾರೆ. ರಿಕ್ಷಾ ಚಾಲಕರಂತೂ ಗರೋಡಿ ದಾಟಿ ಹೋದರೆ ಒಮ್ಮೆ ನಮಸ್ಕರಿಸದೆ ಮುಂದೆ ಹೋಗುವುದಿಲ್ಲ. ಅದೆಷ್ಟೋ ಜನ ರಿಕ್ಷಾ ಚಾಲಕರು ಗರೋಡಿಗೆ ನಮಸ್ಕರಿಸಿಯೇ ತಮ್ಮ ದಿನವನ್ನು ಆರಂಭಿಸುತ್ತಾರೆ.
ರಿಕ್ಷಾ ಚಾಲಕರು ಅನುಪಮ ಭಕ್ತಿಯಿಂದ ಕಾಣುವ ಅವಳಿ ವೀರರೇ ಅನಾಹುತವನ್ನು ತಪ್ಪಿಸಿದರು ಎನ್ನುವುದು ಎಲ್ಲರಿಗೂ ಇರುವ ನಂಬಿಕೆ. ಅದಕ್ಕಿಂತಲೂ ಹೆಚ್ಚಾಗಿ ಈ ರಿಕ್ಷಾ ಪಡೀಲ್‌ನಿಂದ ಪಂಪ್‌ವೆಲ್ ಕಡೆಗೆ ಸಾಗುವ ದಾರಿಯಲ್ಲಿ ಕೇವಲ ೨೦ ಸೆಕೆಂಡ್‌ಗಳಷ್ಟು ಹಿಂದೆ ಒಂದು ಗ್ಯಾಸ್ ಟ್ಯಾಂಕರ್ ದಾಟಿ ಹೋಗಿತ್ತು. ಒಂದೊಮ್ಮೆ ಈ ವೇಳೆ ಏನಾದರೂ ಬಾಂಬ್ ಸ್ಫೋಟವಾಗಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ ಕಪಿತಾನಿಯೋ ಶಾಲೆ ಇತ್ತು. ಅದು ಶಾಲೆ ಬಿಟ್ಟು ಮಕ್ಕಳು ಮನೆಗೆ ಹೊರಡುವ ಹೊತ್ತಾಗಿತ್ತು. ಅಲ್ಲೇನಾದರೂ ಅವಘಡ ಸಂಭವಿಸಿದ್ದರೆ ಮತ್ತಷ್ಟು ಅನಾಹುತದ ಅಪಾಯವಿತ್ತು ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.
ಇಂಥ ಎಲ್ಲ ಅಪಾಯಗಳನ್ನು ತಪ್ಪಿಸಿ, ಜನರನ್ನೂ ರಕ್ಷಿಸಿ, ಒಬ್ಬ ಕ್ರಿಮಿನಲ್, ಉಗ್ರ ಸಿಕ್ಕಿಬೀಳುವಂತೆ ಮಾಡಿದ್ದು ಅವಳಿ ವೀರರ ಮಹಿಮೆ ಎನ್ನುವುದು ಕರಾವಳಿಗರ ನಂಬಿಕೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರೀಕ್‌ನ ಆ ಒಂದು ಎಡವಟ್ಟು ತಪ್ಪಿಸಿತು ಭಾರಿ ಸ್ಫೋಟದ ಅನಾಹುತ; ಐಇಡಿ ಬ್ಲಾಸ್ಟ್ ಹಿಂದಿನ ಸತ್ಯವಿದು!