Site icon Vistara News

ಮಂಗಳೂರು ಸ್ಫೋಟ | ಯಕ್ಷಗಾನ, ಕಂಬಳ, ಜಾತ್ರೆಗೆ ಹಿಂದುಗಳ ಸೋಗಿನಲ್ಲಿ ಉಗ್ರರು ಬಂದಾರು, ಹುಷಾರು: ಪೇಜಾವರ ಶ್ರೀ

(Udupi Pejawar Mutt Seer Sri Vishwaprasanna Teertha Swamiji)

ಉಡುಪಿ: ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಉಗ್ರರು ಹಿಂದುಗಳ ಸೋಗಿನಲ್ಲಿ ಬಂದು ದುಷ್ಕೃತ್ಯಗಳನ್ನು (ಮಂಗಳೂರು ಸ್ಫೋಟ) ನಡೆಸುವ ಅಪಾಯವಿರುತ್ತದೆ. ಈ ಬಗ್ಗೆ ನಾವು ಸದಾ ಜಾಗೃತವಾಗಿರಬೇಕು ಎಂದು ಉಡುಪಿ ಪೇಜಾವರ ಮಠದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ

ಮಂಗಳೂರು ಕುಕ್ಕರ್ ಬಾಂಬ್ ‌ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ. ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವಗಳು ನಡೆಯುತ್ತಿವೆ. ಜನಸಂದಣಿ ಹೆಚ್ಚಿರುವ ಸಮಾರಂಭಗಳು ಜರುಗುತ್ತವೆ. ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ ಉಂಟಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಅವರು ಹೇಳಿದರು.

ಯಾವುದೇ ಸಂದೇಹಾಸ್ಪದ ಚಟುವಟಿಕೆ, ವ್ಯಕ್ತಿಗಳನ್ನು ಕಂಡ ಕೂಡಲೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ ಅವರು, ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ದಾಖಲೆ ಪಡೆಯಬೇಕು. ಇಲ್ಲವಾದರೆ ಇಂತಹ ಸಂಧರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತದೆ. ಮಾತ್ರವಲ್ಲ ಕೆಲವರು ಇಂಥ ನೀಚ ಕೃತ್ಯ ನಡೆಸಿ ಅದನ್ನು ಹಿಂದುಗಳ ತಲೆಗೆ ಕಟ್ಟುವ ಪ್ರಯತ್ನವನ್ನೂ ನಡೆಸುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ಹಿಂದೂ ಸಂಕೇತಗಳನ್ನು ಬಳಸಿ ಇಂತಹ ಕೃತ್ಯ ಮಾಡುವುದನ್ನು ನೋಡುತ್ತಿದ್ದೇವೆ. ಇದು ಭಯೋತ್ಪಾದಕ ಕೃತ್ಯಗಳನ್ನು ಹಿಂದುಗಳ ಮೇಲೆ ಹೇರುವ ಪ್ರಯತ್ನ ಮಾಡುತ್ತಿರುವುದರ ಸೂಚನೆ. ಹೀಗಾಗಿ ಇನ್ನಷ್ಟು ಎಚ್ಚರಿಕೆ ಹೊಂದಿರಬೇಕು ಎಂದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಚಾರ್ಮಾಡಿ ತಪ್ಪಲಲ್ಲಿ ನಡೀತಾ ಟ್ರಯಲ್‌ ಬ್ಲಾಸ್ಟ್? ಸ್ಯಾಟಲೈಟ್‌ ಫೋನ್‌ ತನಿಖೆ ವೇಳೆ ಸಿಕ್ಕ ಸ್ಫೋಟಕ ಮಾಹಿತಿ

Exit mobile version