ಮೈಸೂರು: ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯ ರೂಟ್ ಮ್ಯಾಪ್ ಕಲೆ ಹಾಕುತ್ತಿದ್ದಾರೆ. ಈ ನಡುವೆ ಶಿವಮೊಗ್ಗ ಮತ್ತು ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿ ಜತೆ ಸಂಪರ್ಕ ಹೊಂದಿದ್ದ ಮೂವರನ್ನು ಬಂಧಿಸಿದ್ದಾರೆ.
ಆರೋಪಿ ಮೈಸೂರಿಗೆ ಯಾವಾಗ ಬಂದ, ಯಾವ ವಾಹನದಲ್ಲಿ ಬಂದ, ಎಲ್ಲಿ ಇಳಿದುಕೊಂಡ, ಆತನಿಗೆ ಯಾರಾದರೂ ಪರಿಚಯ ಇದ್ದಾರಾ, ಮನೆ ಬಾಡಿಗೆಗೆ ಪಡೆಯುವ ಮುನ್ನ ಎಲ್ಲಿ ಉಳಿದುಕೊಂಡಿದ್ದ, ಮನೆ ಬಾಡಿಗೆ ಪಡೆದ ಮೇಲೂ ಯಾವೆಲ್ಲ ಜಾಗಕ್ಕೆ ಭೇಟಿ ನೀಡಿದ್ದ ಇತ್ಯಾದಿ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಮತ್ತು ಗುಪ್ತಚರ ಸಂಸ್ಥೆ ರಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಜ್ಞಾತ ಸ್ಥಳದಲ್ಲಿದ್ದುಕೊಂಡು ನಗರ ಪೊಲೀಸ್ ಆಯುಕ್ತರಿಂದ ರಾಷ್ಟ್ರೀಯ ತನಿಖಾ ತಂಡಗಳ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಆರೋಪಿಗೆ ಸಿಮ್ ನೀಡಿದ್ದ ಅಗ್ರಹಾರದ ಸೈಯದ್ ಅಹ್ಮದ್ ಎಂಬಾತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಸಿಮ್ ಖರೀದಿಸಲು ನೀಡಿದ ಆಧಾರ್ ಕಾರ್ಡ್ ಯಾವುದು? ಆರೋಪಿ ಜತೆ ಮೊದಲೇ ಸಂಪರ್ಕ ಇತ್ತಾ ಇತ್ಯಾದಿ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಆರೋಪಿಗಳ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ ಮತ್ತಷ್ಟು ವ್ಯಕ್ತಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ | Mangalore Blast | ಶಾರಿಕ್ ಜತೆ ಸಂಪರ್ಕ ಹೊಂದಿದ್ದ ಮೂವರ ಬಂಧನ, ಆಸ್ಪತ್ರೆಗೆ ಬಂದ ಶಾರಿಕ್ ಸೋದರಿ