ಮಂಗಳೂರು: ನವೆಂಬರ್ ೧೯ರ ಸಂಜೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಹೊತ್ತುಕೊಂಡಿದೆ. ತಾನೇ ಈ ಸ್ಫೋಟದ ರೂವಾರಿ ಎಂದು ಐಆರ್‌ಸಿ ಎಂದು ಕರೆಯಲಾಗುವ ಈ ಸಂಘಟನೆ ಹೇಳಿಕೊಂಡಿದೆ. ಜತೆಗೆ ಬಾಂಬ್ ಸ್ಫೋಟದ ಟಾರ್ಗೆಟ್ ಯಾವುದು ಎಂದು ಕೂಡಾ ಬಯಲು ಮಾಡಿದೆ.
ಡಾರ್ಕ್ ವೆಬ್ ಮೂಲಕ Instagramನಲ್ಲಿ ಹೀಗೊಂದು ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, ತಾನೇ ಬಾಂಬ್ ಸ್ಫೋಟದ ವ್ಯವಸ್ಥೆ ಮಾಡಿದ್ದು ಎಂದಿದೆ. ಅಸಲಿಗೆ ಸ್ಫೋಟದ ಪ್ಲಾನ್ ಇದ್ದಿದ್ದು ಪಂಪ್ ವೆಲ್ ಅಥವಾ ಬೇರೆ ಸ್ಥಳಗಳು ಅಲ್ಲ, ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಎಂದು ಹೇಳಲಾಗಿದೆ. ಈ ವಿಚಾರವನ್ನು ಕೌನ್ಸಿಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ಅರೇಬಿಕ್ ಭಾಷೆಯಲ್ಲಿ ಹಾಕಲಾಗಿರುವ ಪೋಸ್ಟ್‌ನಲ್ಲಿ Majis Al muqawamat Al’Islamia ಎಂದು ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ಆಗಿತ್ತು ಎಂದಿದೆ.
ಈ ಹೊಸ ಮಾಹಿತಿಯ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ರಾಜ್ಯ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.
ಸತ್ಯವೋ? ಸುಳ್ಳೋ?
ಈ ಪೋಸ್ಟ್ ಎಷ್ಟರಮಟ್ಟಿಗೆ ನಿಜ ಅನ್ನುವುದು ಸ್ಪಷ್ಟವಾಗಿಲ್ಲ. ಕೆಲವೊಮ್ಮೆ ಸಂಘಟನೆಗಳು ಪರಿಸ್ಥಿತಿಯ ಲಾಭ ಎತ್ತುವುದಕ್ಕಾಗಿ ಇಂಥ ಹೇಳಿಕೆಗಳನ್ನು ನೀಡುತ್ತವೆ. ಸ್ಪೋಟದಲ್ಲಿ ಭಾಗಿಯಾಗಿರುವ ಉಗ್ರ ಶಾರಿಕ್ ಚೇತರಿಸಿಕೊಂಡ ಬಳಿಕ ಆತನ ವಿಚಾರಣೆಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದಾಗಿದೆ. ಈ ನಡುವೆ, ಈ ಪೋಸ್ಟ್ ನ ಬೆನ್ನು ಬಿದ್ದಿರುವ ಕೇಂದ್ರ ತನಿಖಾ ಸಂಸ್ಥೆಗಳು ಉಗ್ರ ಸಂಸ್ಥೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿವೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಬೆಂಗಳೂರಿನಲ್ಲಿ ಉಗ್ರ ಮತೀನ್ ಜತೆಗಿದ್ದ ಶಾರಿಕ್, ದಾಸರಹಳ್ಳಿ, ಅಮೃತಹಳ್ಳಿಯಲ್ಲಿ ಸರ್ಚ್