ಮಡಿಕೇರಿ: ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ಹಿಂದೆ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರ ಶಾರಿಕ್ ಇರುವುದು ಬೆಳಕಿಗೆ ಬಂದಿದೆ. ಆತ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ನಡುವೆ, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಮಡಿಕೇರಿಯಲ್ಲಿ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ.
ಹೀಗಾಗಿ ಭಯೋತ್ಪಾದನೆ ನಿಷ್ಕ್ರಿಯ ದಳದ ಅಧಿಕಾರಿಗಳು ಮಡಿಕೇರಿಯ ಜನನಿಬಿಡ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇಡೀ ಪೇಟೆಯಲ್ಲಿ ಮಾತ್ರವಲ್ಲ, ಜಿಲ್ಲಾಧಿಕಾರಿ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಎಲ್ಲ ಕಡೆ ತಪಾಸಣೆ ನಡೆಸುತ್ತಿದ್ದಾರೆ.
ಕೊಡಗಿನಲ್ಲೇ ಯಾಕೆ ಇಷ್ಟು ಕಟ್ಟೆಚ್ಚರ?
ಕೊಡಗು ಜಿಲ್ಲೆ ಇತ್ತೀಚಿನ ದಿನಗಳಲ್ಲಿ ತುಂಬಾ ಸೂಕ್ಷ್ಮ ಜಿಲ್ಲೆಯಾಗಿ ಪರಿವರ್ತನೆಗೊಂಡಿದೆ. ಕೇರಳಕ್ಕೆ ಹೊಂದಿಕೊಂಡಿರು ವ ಜಿಲ್ಲೆ ಉಗ್ರರ ಅಡಗುದಾಣವಾಗುತ್ತಿರುವ ಆತಂಕ ಒಂದೆಡೆಯಾದರೆ ಇತ್ತೀಚೆಗೆ ಹಲವು ಕೋಮು ಸೂಕ್ಷ್ಮ ವಿದ್ಯಮಾನಗಳು ಇಲ್ಲಿ ಘಟಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷಕ್ಕೂ ಸಾಕ್ಷಿಯಾಗಿದೆ. ಪಿಎಫ್‌ಐ ಹಲವು ನಾಯಕರಿಗೆ ಇಲ್ಲಿ ಬೆಂಬಲದ ನೆಲೆ ಇದೆ ಎಂಬ ಆಪಾದನೆ ಇದೆ.
ಅದಕ್ಕಿಂತಲೂ ಹೆಚ್ಚಾಗಿ ಮೈಸೂರಿನಲ್ಲಿ ವಾಸವಾಗಿದ್ದ ಉಗ್ರ ಶಾರಿಕ್ ಅಲ್ಲಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಮಡಿಕೇರಿಯನ್ನು ದಾಟಿ ಹೋಗಿದ್ದ ಎಂದು ತಿಳಿದುಬಂದಿದೆ. ಆತ ಕೇವಲ ನೇರವಾಗಿ ಮಂಗಳೂರಿಗೆ ಹೋಗಿದ್ದನೇ ಅಥವಾ ಮಡಿಕೇರಿ ಭಾಗದಲ್ಲಿ ಎಲ್ಲಾದರೂ ಕುಕ್ಕರ್ ಬಾಂಬ್ ಇಟ್ಟು ಹೋಗಿದ್ದನೇ ಎನ್ನುವ ಬಗ್ಗೆ ಸಹಜವಾಗಿ ಸಂಶಯಗಳಿವೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ತೀರಾ ಕಟ್ಟೆಚ್ಚರ ವಹಿಸಲಾಗಿದೆ.
ಪ್ರತಿ ವಾರ ಚೆಕ್ ಮಾಡುತ್ತೇವೆ
ಕೊಡಗಿನಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೊಡಗು ಎಸ್ಪಿ ಎಂ. ಎ. ಅಯ್ಯಪ್ಪ, ʻʻನಾವು ಪ್ರತಿ ವಾರ ಚೆಕ್ ಮಾಡುತ್ತೇವೆ. ಜೊತೆಗೆ ಮಂಗಳೂರಿನಲ್ಲಿ ಸ್ಫೋಟ ಘಟನೆ ಆಗಿರುವುದರಿಂದ ಮತ್ತಷ್ಟು ಜಾಗೃತೆಯಿಂದ ಪರಿಶೀಲನೆ ನಡೆಯುತ್ತಿದೆ. ಕೋರ್ಟ್, ಡಿಸಿ ಆಫೀಸ್ ಸೇರಿದಂತೆ ಜನನಿಬಿಡ ಜಾಗಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಜನರಿಗೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ಕ್ರಮ ವಹಿಸಲಾಗಿದೆʼʼ ಎಂದು ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ನ ಹಿಂದಿದ್ದಾನೆ ಮತ್ತೊಬ್ಬ ಮೇನ್ ಹ್ಯಾಂಡ್ಲರ್ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ