ಮಂಗಳೂರು: ನವೆಂಬರ್ ೧೯ರ ಸಂಜೆ ೪.೧೯ಕ್ಕೆ ಮಂಗಳೂರಿನ ನಾಗುರಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಧಾನ ಆರೋಪಿ, ಶಂಕಿತ ಉಗ್ರ ಶಾರಿಕ್ ಚೇತರಿಸಿಕೊಂಡಿದ್ದು, ಸೋಮವಾರದಿಂದಲೇ ಪೊಲೀಸರು ಆತನ ವಿಚಾರಣೆ ಆರಂಭಿಸಿದ್ದಾರೆ.
ಸ್ಫೋಟದ ವೇಳೆ ಗಾಯಗೊಂಡಿದ್ದ ಶಾರಿಕ್‌ನನ್ನು ಅಂದೇ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಶ್ವಾಸಕೋಶದೊಳಗೆ ಹೊಗೆ ತುಂಬಿದ್ದರಿಂದ ಆತನ ಆರೋಗ್ಯ ಸಂಪೂರ್ಣ ಏರುಪೇರಾಗಿತ್ತು. ಆತನ ಕಣ್ಣಿಗೂ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಆತನಿಗೆ ಮಾತನಾಡಲು ಆಗುತ್ತಿರಲಿಲ್ಲ. ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ. ಹೀಗಾಗಿ ಆತನಿಂದ ಯಾವುದೇ ಮಾಹಿತಿ ಪಡೆಯಲು ಅಂದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಆತ ಚೇತರಿಸಿಕೊಂಡಿರುವುದರಿಂದ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿದ್ದಾರೆ.
ಸೋಮವಾರದಿಂದಲೇ ವಿಚಾರಣೆ ಆರಂಭ
ಚಿಕಿತ್ಸೆಗೆ ಸ್ಪಂದಿಸಿ ಮಾತನಾಡುವ ಸ್ಥಿತಿಗೆ ತಲುಪಿರುವ ಶಾರಿಕ್‌ನನ್ನು ಸೋಮವಾರ ಸಂಜೆಯಿಂದಲೇ ಮಂಗಳೂರು ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ. ಸೋಮವಾರ ಸತತ 2 ಗಂಟೆಗಳ ಕಾಲ ಶಾರಿಕ್ ವಿಚಾರಣೆ ನಡೆಸಿದ ತಂಡ ಹಲವಾರು ಮಹತ್ವದ ವಿಚಾರ ಕಲೆ ಹಾಕಿದೆ ಎನ್ನಲಾಗಿದೆ. ಬುಧವಾರ ಮುಂಜಾನೆಯಿಂದಲೇ ಮತ್ತೆ ವಿಚಾರಣೆ ಆರಂಭವಾಗಿದ್ದು, ಮಧ್ಯಾಹ್ನದವರೆಗೆ ಸತತ ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದೆ.
ಕುಕ್ಕರ್ ಬಾಂಬ್ ಹಿಡಿದುಕೊಂಡು ಹೋಗುತ್ತಿದ್ದ ಆತನ ಉದ್ದೇಶವೇನಿತ್ತು, ಟಾರ್ಗೆಟ್ ಯಾವುದಾಗಿತ್ತು, ಆತನ ಹಿಂದೆ ಯಾರಿದ್ದಾರೆ ಎನ್ನುವ ವಿಚಾರಗಳನ್ನೆಲ್ಲ ಪೊಲೀಸರು ಹೊರತೆಗೆಯಬೇಕಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೂರು ದೇವಸ್ಥಾನ, ಮೂರು ಸಾರ್ವಜನಿಕ ಕಟ್ಟಡ: ಏನಿದು ಟೆರರ್ ಟಾರ್ಗೆಟ್?