ಮಂಗಳೂರು: ಕಳೆದ ಶನಿವಾರ ಸಂಜೆ ೪.೩೦ಕ್ಕೆ ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ, ಸ್ಪೋಟ ರೂವಾರಿ ಮೊಹಮ್ಮದ್ ಶಾರಿಕ್ ಪರಮ ಪಾತಕಿ ಮಾತ್ರವಲ್ಲ, ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳುವಲ್ಲಿ ಪಕ್ಕಾ ಕ್ರಿಮಿನಲ್ ಆಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ.
ಈ ಹಿಂದೆ ಗೋಡೆಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದು ೨೦೨೧ರ ಸೆಪ್ಟೆಂಬರ್‌ನಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ಆತ ಬಳಿಕ ಇನ್ನಷ್ಟು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಆದರೆ, ಆತನ ಯಾವ ಚಟುವಟಿಕೆಗಳೂ ಪೊಲೀಸರಿಗೆ ತಿಳಿಯುತ್ತಲೇ ಇರಲಿಲ್ಲ. ಇದರಲ್ಲಿ ಸಣ್ಣಮಟ್ಟದಲ್ಲಿ ಪೊಲೀಸರ ವೈಫಲ್ಯವೂ ಇದೆಯಾದರೂ ಪೊಲೀಸರನ್ನು ಯಾಮಾರಿಸಿ ಆತ ತಂತ್ರಗಳನ್ನು ಹೆಣೆದಿದ್ದ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.
ಉಗ್ರ ಶಾರಿಕ್ ಭಯೋತ್ಪಾದನಾ ಚಟುವಟಿಕೆಗಳ ಸಂದರ್ಭದಲ್ಲಿ ಎಲ್ಲೂ ಹಣವನ್ನು ಉಪಯೋಗಿಸುತ್ತಿರಲಿಲ್ಲ. ಬದಲಾಗಿ ಬಿಟ್ ಕಾಯಿನ್ ಬಳಸುತ್ತಿದ್ದ ಎಂದು ಹೇಳಲಾಗಿದೆ. ಯಾರ ಜೊತೆಯೂ ನಗದು ವ್ಯವಹಾರವೇ ಇರಲಿಲ್ಲ. ಆತನ ಚಟುವಟಿಕೆಗಳಿಗೆ ದುಬೈ ಸೇರಿದಂತೆ ಕೆಲವು ದೇಶಗಳಿಂದ ಬಿಟ್ ಕಾಯಿನ್ ಮೂಲಕವೇ ಹಣ ವರ್ಗಾವಣೆ ಆಗುತ್ತಿತ್ತು ಎಂಬ ಮಾಹಿತಿ ಇದೆ.
ಬ್ಲಾಕ್ ವೆಬ್ ಮೂಲಕ ಬಿಟ್ ಕಾಯಿನ್ ದಂಧೆ ಮಾಡುತ್ತಿದ್ದ ಶಾರಿಕ್ ಮಾತುಕತೆಗೆ ಇಂಟರ್‌ನೆಟ್ ಕಾಲ್ ಮಾಡ್ತಿದ್ದ. ಹೀಗಾಗಿ ಅವನ ಚಲನವಲನಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಯೇ ಇರಲಿಲ್ಲ.
ಮನೆ ಹುಡುಕಿದ್ದೂ ಒಎಲ್‌ಎಕ್ಸ್‌ನಲ್ಲಿ!
ಸ್ಫೋಟದ ಪೂರ್ವ ಸಿದ್ಧತೆಗಾಗಿ ಮೈಸೂರನ್ನು ಆಯ್ಕೆ ಮಾಡಿದ್ದ ಶಾರಿಕ್ ಅಲ್ಲಿ ಮನೆಯನ್ನು ಹುಡುಕುವುದಕ್ಕಾಗಿ ಆಯ್ಕೆ ಮಾಡಿದ್ದು ಕೂಡಾ ಆನ್‌ಲೈನ್ ದಾರಿಯನ್ನೇ. ಕೇರಳದಲ್ಲಿದ್ದ ಆತ ಮೈಸೂರಿಗೆ ಬಂದು ಮನೆ ಹುಡುಕಲು ಬೀದಿ ಬೀದಿ ಅಲೆದರೆ ಪೊಲೀಸರಿಗೆ ತನ್ನ ಗುರುತು ಸಿಗಬಹುದು ಎಂದು ಭಾವಿಸಿ ಆನ್‌ಲೈನ್‌ನಲ್ಲೇ ಮನೆ ನೋಡಿ, ಮಾಲೀಕರಿಗೆ ಕರೆ ಮಾಡಿ ಮನೆ ಫೈನಲ್ ಮಾಡಿದ್ದ.
ಮನೆ ಮಾಲೀಕನ ನಂಬರ್‌ಗೆ ಕರೆ
ಕೇರಳದಲ್ಲಿಯೇ ಕುಳಿತು ಮನೆ ಮಾಲೀಕ ಮೋಹನ್ ಅವರಿಗೆ ಕರೆ ಮಾಡಿದ್ದ ಶಾರಿಕ್, ತಾನು ಪ್ರೇಮ್ ರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ತನಗೆ ನಿಮ್ಮ ಮನೆ ಇಷ್ಟವಾಗಿದೆ. ಫೋಟೊಗಳನ್ನು ನೋಡಿದ್ದೇನೆ. ಬಹುತೇಕ ಫೈನಲ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ಮೋಹನ್ ಸಹ, “ಯಾವಾಗ ಬಂದು ನೋಡುತ್ತೀರಾ..?” ಎಂದು ಕೇಳಿದ್ದಾರೆ. ಇದಕ್ಕೆ ಶಾರಿಕ್, “ನಾನು ಕೇರಳದಲ್ಲಿ ಪ್ರವಾಸದಲ್ಲಿದ್ದೇನೆ. ಅಲ್ಲಿಂದ ಬಂದ ತಕ್ಷಣ ನಿಮಗೆ ತಿಳಿಸುತ್ತೇನೆ” ಎಂದು ಹೇಳಿದ್ದ. ಬಳಿಕ ಅದೇ ರೀತಿ ಅವರನ್ನು ಸಂಪರ್ಕಿಸಿ ವಿಶ್ವಾಸ ಗಳಿಸಿ ಮನೆ ಪಡೆದಿದ್ದ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಎಲ್ಲೂ ಮುಸ್ಲಿಂ ಐಡೆಂಟಿಟಿ ತೋರಿಸಿಕೊಂಡಿರಲಿಲ್ಲ, ತನ್ನನ್ನು ಹಿಂದು ಎಂದೇ ಬಿಂಬಿಸಿಕೊಂಡಿದ್ದ!