ಮೈಸೂರು: ಮೈಸೂರಿನಲ್ಲಿ ಸುಮಾರು ಒಂದುವರೆ ತಿಂಗಳ ಕಾಲ ವಾಸವಾಗಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಅಲ್ಲಿ ಹಿಂದು ಎಂದೇ ಗುರುತಿಸಿಕೊಂಡಿದ್ದ. ಆದರೆ, ಅತ್ಯಂತ ಗುಪ್ತವಾಗಿ ಮುಸ್ಲಿಂ ಗೆಳೆಯರನ್ನು ಮಾಡಿಕೊಂಡಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ಶಾರಿಕ್ ಸಿಕ್ಕಿಬೀಳುತ್ತಿದ್ದಂತೆಯೇ ಪೊಲೀಸರಿಗೆ ಮೊದಲು ಗೊತ್ತಾದ ಸಂಗತಿಯೇನೆಂದರೆ ಆತ ಮೈಸೂರಿನಲ್ಲಿದ್ದ ಎನ್ನುವುದು. ಅಲ್ಲಿನ ಮೇಟಗಳ್ಳಿಯ ಲೋಕನಾಯಕ ನಗರದಲ್ಲಿ ಮೋಹನ್ ಕುಮಾರ್ ಎಂಬವರ ಮನೆಯಲ್ಲಿ ವಾಸವಾಗಿದ್ದ ಎನ್ನುವುದನ್ನು ಪತ್ತೆ ಹಚ್ಚಿದರು. ಅಲ್ಲಿಗೆ ಹೋಗಿ ತಪಾಸಣೆ ನಡೆಸಿದರು. ಆ ಬಳಿಕ ಆತ ಕೆಲಸ ಮಾಡಿಕೊಂಡಿದ್ದ ಪ್ರಸಾದ್ ಎಂಬವರ ಶ್ರೀ ಮಲೈ ಮಹದೇಶ್ವರ ಮೊಬೈಲ್ ಅಂಗಡಿಯಲ್ಲಿ ವಿಚಾರಣೆ ನಡೆಸಿದ್ದರು.
ಈ ನಡುವೆ ಅವರಿಗೆ ಗೊತ್ತಾದ ಸಂಗತಿಯೇನೆಂದರೆ ಶಾರಿಕ್‌ಗೆ ಅಲ್ಲೊಬ್ಬ ಗೆಳೆಯನಿದ್ದ ಎನ್ನುವುದು. ಅವನೇ ಮೊಹಮ್ಮದ್ ರುವುಲ್ಲಾ. ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ಹೇಳಿಕೊಂಡು ಹಿಂದುಗಳಂತೆಯೇ ಪೋಸ್ ಕೊಡುತ್ತಿದ್ದ ಶಾರಿಕ್ ಅಲ್ಲೂ ಮುಸ್ಲಿಮರನ್ನು ಹಚ್ಚಿಕೊಂಡಿದ್ದ ಎನ್ನುವುದು ಪೊಲೀಸರಿಗೆ ಗೊತ್ತಾಯಿತು. ಈ ನಡುವೆ ರುವುಲ್ಲಾ ಜತೆಗಿನ ಸ್ನೇಹ ತಿಳಿಯುತ್ತಿದ್ದಂತೆಯೇ ಆತನನ್ನು ವಶಕ್ಕೆ ತೆಗೆದುಕೊಂಡು ಮಂಗಳೂರಿಗೆ ಕರೆದೊಯ್ದರು. ಮಂಗಳವಾರ ಆತನನ್ನು ಮತ್ತೆ ಮಂಗಳೂರಿನಿಂದ ಮೈಸೂರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ರುವುಲ್ಲಾ ಮನೆ ಖಾಲಿ ಖಾಲಿ
ಮೊಹಮ್ಮದ್ ರುವುಲ್ಲಾನ ಮನೆ ಇರುವುದು ಮೈಸೂರಿನ ರಾಜೀವ್ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ. ಇದೇ ಮನೆಯಿಂದ ಅತನನ್ನು ಬಂಧಿಸಲಾಗಿತ್ತು. ಮೊಹಮ್ಮದ್ ರುವುಲ್ಲಾ ಬಂಧನದ ಬಳಿಕ ಮನೆಯವರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈಗ ಮನೆ ಖಾಲಿಯಾಗಿದೆ. ಮೊಹಮ್ಮದ್ ರುವುಲ್ಲಾ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಮಂಗಳವಾರ ರುವುಲ್ಲಾನನ್ನು ಶಾರಿಕ್ ವಾಸವಿದ್ದ ಮೈಸೂರಿನ ಲೋಕನಾಯಕ ನಗರದ 10ನೇ ಕ್ರಾಸ್ ನಲ್ಲಿರುವ ಬಾಡಿಗೆ ಮನೆಗೆ ಕರೆ ತಂದು ವಿಚಾರಣೆ ನಡೆಸಲಾಯಿತು. ಶಾರಿಕ್ ಬಾಂಬ್ ತಯಾರಿಸಲು ಮನೆಯಲ್ಲಿ ಇರಿಸಿದ್ದ ಕಚ್ಚಾ ವಸ್ತುಗಳ ಬಗ್ಗೆ ಸ್ಥಳದ ಮಹಜರ್ ಮಾಡಲಾಯಿತು. ಜತೆಗೆ ಶಾರಿಕ್ ಸ್ನೇಹಿತ ರುವುಲ್ಲಾನಿಂದ ಮಾಹಿತಿ ಕಲೆ ಹಾಕಲಾಗಿದೆ.