ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ಆರೋಪಿಯಾಗಿರುವ ಶಾರೀಕ್ ಆರೋಗ್ಯ ಸರಿಪಡಿಸಲು ವೈದ್ಯರು ಸರ್ಕಸ್ ನಡೆಸುತ್ತಿದ್ದಾರೆ. ಈತ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ತನಿಖೆಗೆ ಹಿನ್ನಡೆಯಾಗಿದೆ.
ಕುಕ್ಕರ್ ಸ್ಫೋಟದಿಂದ ಆಸ್ಪತ್ರೆ ಸೇರಿರುವ ಶಾರೀಕ್‌ನ ಸಾಕಷ್ಟು ಚರ್ಮ ಸುಟ್ಟಿದೆ. ಈತನಿಗೆ ಪ್ರೊಟೀನ್ ಪೌಡರ್‌ಗಳನ್ನು ವೈದ್ಯರು ನೀಡುತ್ತಿದ್ದಾರೆ. ಈಗಾಗಲೆ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿದ್ದು, ಶಾರೀಕ್ ಆರೋಗ್ಯ ಸರಿಯಾದ ಕೂಡಲೆ ಬೆಂಗಳೂರಿನ ಎನ್‌ಐಎ ಕಚೇರಿಗೆ ಆತನನ್ನು ಶಿಫ್ಟ್ ಮಾಡಲು ಎನ್‌ಐಎ ಸಿದ್ಧತೆ ನಡೆಸಿದೆ.
ಮಂಗಳೂರಿನ ನಾಗುರಿಯಲ್ಲಿ ನ.19ರಂದು ರಿಕ್ಷಾದಲ್ಲಿ ಶಾರೀಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್ ಸ್ಫೋಟಿಸಿತ್ತು. ಈಗಾಗಲೇ ತೀರ್ಥಹಳ್ಳಿ ಮೂಲದ ಶಾರೀಕ್‌ನನ್ನು ಹಲವು ಸುತ್ತುಗಳ ತನಿಖೆಗೆ ಒಳಪಡಿಸಲಾಗಿದ್ದು, ಆತ ಕುಕ್ಕರ್ ಬಾಂಬ್ ತಯಾರಿಸಿದ್ದು ಹಾಗೂ ಸ್ಫೋಟಿಸಲು ಪ್ರಯತ್ನಿಸಿದ್ದು ದೃಢಪಟ್ಟಿದೆ. ನಿಷೇಧಿತ ಪಿಎಫ್‌ಐ ಜತೆಗೂ ಆತ ಸಂಬಂಧ ಹೊಂದಿದ್ದು, ಐಸಿಸ್ ಜತೆಗೆ ಆತ ಹೊಂದಿರಬಹುದಾದ ನಂಟಿನ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಡಗಿನ ಹೋಮ್‌ಸ್ಟೇನಲ್ಲಿ ತಂಗಿದ್ದರೇ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ 11 ಆರೋಪಿಗಳು?