ಮಂಗಳೂರು: ನವೆಂಬರ್ ೧೯ರಂದು ಸಂಜೆ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಉಗ್ರ ಶಾರಿಕ್‌ನ ಶ್ವಾಸಕೋಶಗಳಲ್ಲಿ ಭಾರಿ ಪ್ರಮಾಣ ಹೊಗೆ ತುಂಬಿಕೊಂಡ ಹಿನ್ನೆಲೆಯಲ್ಲಿ ವಿಶೇಷ ಚಿಕಿತ್ಸೆ ನೀಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಆತನನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದಲ್ಲಿ ಗಾಯಗೊಂಡು ಮಂಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ, ಹಲವು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆ ಮೂಲದ ಉಗ್ರ ಶಾರಿಕ್ ಎಂದು ತಿಳಿಯುತ್ತಿದ್ದಂತೆಯೇ ದೊಡ್ಡ ಮಟ್ಟದ ಸಂಚಲನ ಉಂಟಾಗಿತ್ತು. ಆತನ ಬಂಧನದಿಂದ ಈ ಪ್ರಕರಣದ ಎಲ್ಲಾ ಒಳಸುಳಿಗಳ ಜತೆಗೆ ಆತನು ಭಾಗಿಯಾಗಿರುವ, ಪ್ಲ್ಯಾನ್ ಮಾಡಿರುವ ಇನ್ನಷ್ಟು ಕುಕೃತ್ಯಗಳ ಮಾಹಿತಿಯನ್ನು ಸಂಗ್ರಹಿಸುವ ಆಶಾವಾದ ವ್ಯಕ್ತವಾಗಿತ್ತು. ಆದರೆ, ಆತ ಇನ್ನೂ ಚೇತರಿಸಿಕೊಳ್ಳದೆ ಇರುವುದು ತನಿಖೆಯನ್ನು ವಿಳಂಬಗೊಳಿಸಿದೆ.
ಮೈಗೆ ಆಗಿರುವ ಸುಟ್ಟ ಗಾಯಗಳ ಜತೆಗೆ ಆತನ ಕಣ್ಣಿಗೂ ಬೆಂಕಿಯಿಂದ ಹಾನಿಯಾಗಿದೆ. ಆತ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಇದುವರೆಗೂ ಆತನ ವಿಚಾರಣೆ ಸಾಧ್ಯವಾಗಿಲ್ಲ. ಆತನಿಂದ ಮಾತಿನ ಮೂಲಕ, ಬರಹದ ಮೂಲಕವೂ ಮಾಹಿತಿ ಪಡೆಯುವುದು ಸಾಧ್ಯವಾಗಿಲ್ಲ.
ಹೊರ ನೋಟದ ಗಾಯಗಳೊಂದಿಗೆ ಆತನ ಶ್ವಾಸಕೋಶಕ್ಕೂ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಕ್ಕರ್ ಬಾಂಬು ಸ್ಫೋಟದ ವೇಳೆ ಭಾರಿ ಪ್ರಮಾಣದ ಹೊಗೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅದು ಶ್ವಾಸಕೋಶಕ್ಕೂ ಪ್ರವೇಶ ಮಾಡಿದೆ.
ಶಾರಿಕ್‌ನ ಶಾರಿಕ್‌ನ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಸ್ಫೋಟದ ವೇಳೆ ಕುಕ್ಕರ್‌ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ವೈದ್ಯರ ತಂಡ ಕುತ್ತಿಗೆಯ ಗಾಯಗಳಿಗೆ ವಿಶೇಷ ಚಿಕಿತ್ಸೆ ನೀಡುತ್ತಿದೆ. ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಂಟು ಮಂದಿ ವೈದ್ಯರಿಂದ ದಿನದ 24 ತಾಸೂ ನಿಗಾ ವಹಿಸಲಾಗಿದೆ. ಶಾರಿಕ್ ಸಣ್ಣ ವಯಸ್ಸಿನವನಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗಿದೆ. ಸುಟ್ಟ ಗಾಯಗಳಾಗಿರುವುದರಿಂದ ಪರಿಸ್ಥಿತಿ ಸ್ಥಿರವಾಗಿದ್ದರೂ ಸೂಕ್ಷ್ಮವಾಗಿದೆ ಎಂದು ವೈದ್ಯರ ಮೂಲಗಳು ತಿಳಿಸಿವೆ. ಇದೇ ಸ್ಫೋಟದಲ್ಲಿ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ್ ಗೂ ಸಮಾನ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಎಲ್ಲೂ ಮುಸ್ಲಿಂ ಐಡೆಂಟಿಟಿ ತೋರಿಸಿಕೊಂಡಿರಲಿಲ್ಲ, ತನ್ನನ್ನು ಹಿಂದು ಎಂದೇ ಬಿಂಬಿಸಿಕೊಂಡಿದ್ದ!