ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಶಾರಿಕ್ ಜತೆ ನಿರಂತರ ಸಂಪರ್ಕ ಹೊಂದಿದ್ದವರಾಗಿದ್ದು, ಆತನೊಂದಿಗಿನ ಸಂಬಂಧದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯಲಿದೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿಯ ಹಲವು ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದು, ಅಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಮಂಗಳೂರಿಗೆ ಕರೆ ತರಲಾಗಿದೆ. ಇವರೆಲ್ಲರೂ ಶಾರಿಕ್ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅವರ ಸಂಬಂಧದ ಆಳ ಏನು? ಸ್ಫೋಟದಲ್ಲಿ ಅವರ ಪಾಲುದಾರಿಕೆ ಏನು ಎನ್ನುವುದು ತನಿಖೆ ವೇಳೆ ಸ್ಪಷ್ಟವಾಗಲಿದೆ.
ಮಂಗಳೂರು ಸ್ಫೋಟ ಮತ್ತು ಶಾರಿಕ್ ತಂಡ ಶಿವಮೊಗ್ಗ, ತುಂಗಾ ತೀರ, ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್‌ಗಳಿಗೆ ಇರುವ ಲಿಂಕ್ ಏನು ಎನ್ನುವುದು ಈ ತನಿಖೆ ವೇಳೆ ಸ್ಪಷ್ಟವಾಗಲಿದೆ.
ಆಸ್ಪತ್ರೆಗೆ ಬಂದ ಸಂಬಂಧಿಕರು
ಆಟೋರಿಕ್ಷಾದಲ್ಲಿ ಬಾಂಬ್ ಸಾಗಿಸುವ ವೇಳೆ ಸ್ಫೋಟಗೊಂಡು ಗಾಯಗೊಂಡ ವ್ಯಕ್ತಿ ಶಾರಿಕ್ ಎನ್ನುವುದನ್ನು ಖಚಿತಪಡಿಸುವುದಕ್ಕಾಗಿ ಆತನ ಕುಟುಂಬಿಕರನ್ನು ಕರೆ ತಂದು ತೋರಿಸಲಾಗುತ್ತಿದೆ. ಭಾನುವಾರ ಶಾರಿಕ್‌ನ ಚಿಕ್ಕಮ್ಮನಿಗೆ ಗಾಯಾಳುವನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ತಂದು ತೋರಿಸಿದಾಗ ತನಗೆ ಸ್ಪಷ್ಟವಾಗುತ್ತಿಲ್ಲ ಎಂದಿದ್ದರು. ಸೋಮವಾರ ಆತನ ಸೋದರಿಯನ್ನು ಕರೆ ತರಲಾಗಿದೆ. ಅವರು ಏನು ಹೇಳುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ | Mangalore Blast | Confirm! ಮಂಗಳೂರು ಬಾಂಬ್ ಸ್ಫೋಟದ ರೂವಾರಿ ತೀರ್ಥಹಳ್ಳಿಯ ಶಾರಿಕ್