ಬೆಂಗಳೂರು: ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ (Mangalore Blast) ಲಘು ಐಇಡಿ ಬಾಂಬ್ ಅನ್ನು ಬಳಸಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದೀಗ ಬೆಂಗಳೂರಿನಿಂದ ಇಬ್ಬರು ನುರಿತ ಎಫ್ಎಸ್ಎಲ್ ತಜ್ಞರು ಮಂಗಳೂರಿನತ್ತ ಹೊರಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ನಾಗುರಿಯಲ್ಲಿ ಆಟೋ ಒಳಗೆ ಕುಕ್ಕರ್ ಸ್ಫೋಟಗೊಂಡಿತ್ತು. ಅದರೊಳಗೆ ಐಇಡಿ ಮಾದರಿಯಲ್ಲಿ ಬಾಂಬ್ ತಯಾರಿಸಿ ಸ್ಫೋಟ ನಡೆಸಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಫ್ಎಸ್ಎಲ್ ತಂಡವನ್ನು ಬೆಂಗಳೂರಿನಿಂದ ಕಳುಹಿಸಲಾಗುತ್ತಿದೆ.
ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗದ ಇಬ್ಬರು ತಜ್ಞರನ್ನು ಈ ಸಂಬಂಧ ನಿಯೋಜನೆ ಮಾಡಲಾಗಿದ್ದು, ಹೆಚ್ಚಿನ ತನಿಖೆಗೆ ಸೂಚನೆ ನೀಡಲಾಗಿದೆ. ಮಂಗಳೂರು ಪೊಲೀಸರು ಮತ್ತು ಮಂಗಳೂರು ಎಫ್ಎಸ್ಎಲ್ ಅಧಿಕಾರಿಗಳ ಕೋರಿಕೆ ಮೇರೆಗೆ ಹೆಚ್ಚುವರಿ ತಜ್ಞರನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಡಲಾಗುತ್ತಿದೆ.
ಇದನ್ನೂ ಓದಿ | Mangalore Blast | ನನ್ನ ಮಗ ಪ್ರತಿಭಾವಂತ, ನಿನ್ನೆ ಅವನ ಹುಟ್ಟುಹಬ್ಬವಿತ್ತು ಎಂದು ಕಣ್ಣೀರಿಟ್ಟ ಪ್ರೇಮ್ ರಾಜ್ ತಾಯಿ
ಎನ್‌ಐಎ ತಂಡದಿಂದ ಪರಿಶೀಲನೆ
ಬೆಂಗಳೂರಿನಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ (ನ.೨೦) ಆಗಮಿಸಿದ್ದಾರೆ. ಆಟೋ ಸ್ಫೋಟಗೊಂಡ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಾಲ್ವರು ಅಧಿಕಾರಿಗಳ ತಂಡವು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದೆ. ಇವರಲ್ಲಿ ಒಬ್ಬರು ಮಹಿಳಾ ಅಧಿಕಾರಿಯೂ ಇದ್ದಾರೆ. ಈಗ ಮಂಗಳೂರು ಪೊಲೀಸರಿಂದ ಘಟನೆ ಹಾಗೂ ಇದುವರೆಗೆ ನಡೆದ ತನಿಖೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, “ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಭಯೋತ್ಪಾದನಾ ಕೃತ್ಯ ಎಂಬುದು ದೃಢಪಟ್ಟಿದೆ. ಇದು ಆಕಸ್ಮಿಕ ಸ್ಫೋಟವಲ್ಲ, ಗಂಭೀರವಾಗಿ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನಾ ಕೃತ್ಯವಾಗಿದೆ ಎಂಬುದು ತಿಳಿದುಬಂದಿದೆ. ಕೇಂದ್ರ ಏಜೆನ್ಸಿಗಳ ಜತೆಗೂಡಿ ಕರ್ನಾಟಕ ರಾಜ್ಯ ಪೊಲೀಸರು ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಉಗ್ರ ಕೃತ್ಯದ ಆಯಾದಲ್ಲಿಯೇ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಇದನ್ನೂ ಓದಿ | Mangalore Blast | ಸ್ಫೋಟಗೊಂಡ ಆಟೋದಲ್ಲಿದ್ದ ಪ್ರಯಾಣಿಕನ ಹೆಸರು ಯೂನಸ್ ಖಾನ್? ಸ್ಫೋಟಕ ಮಾಹಿತಿ ಬಹಿರಂಗ
ಈಗಾಗಲೇ ಪೊಲೀಸರು ಹಲವಾರು ರೀತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ನಗರದ ಪ್ರಮುಖ ಬೀದಿಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ತಜ್ಞರು ಭೇಟಿ ನೀಡಿದ್ದು, ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಕೇಂದ್ರ ಭದ್ರತಾ ಪಡೆ ಜತೆ ಜಂಟಿ ತನಿಖೆ
ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದು ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯ ಎಂದು ಕಂಡುಬಂದಿದ್ದು, ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದರು.
ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ನಮ್ಮ ಮಂಗಳೂರು ಪೊಲೀಸರು ಇದರ ಹಿನ್ನೆಲೆಯನ್ನು ಭೇದಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಕರಣದ ಹಿನ್ನೆಲೆ ಬಹಳ ದೊಡ್ಡದಿದೆ. ಭಯೋತ್ಪಾದನಾ ಸಂಘಟನೆಗಳ ಲಿಂಕ್ ಇದರ ಹಿಂದಿದೆ ಎಂಬ ಸೂಚನೆ ಕಂಡು ಬರುತ್ತಿದೆ. ಈ ಸಂಬಂಧ ಕೇಂದ್ರ ಭದ್ರತಾ ಪಡೆ ಜತೆಗೆ ಮಾತುಕತೆ ನಡೆದಿದೆ. ಅವರೂ ಸಹ ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಒಂದೆರಡು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಕರಾವಳಿ ಭಾಗದಲ್ಲಿ ಈ ರೀತಿಯ ಚಟುವಟಿಕೆ ಹಲವಾರು ವರ್ಷಗಳಿಂದ ನಡೆಯುತ್ತಿವೆ. ಈ ಬಗ್ಗೆಯೂ ತನಿಖೆ ನಡೆದಿದೆ. ಬಹಳ ಬೇಗ ಈ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಇದನ್ನೂ ಓದಿ | Mangalore Blast | 2 ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದ ಪ್ರೇಮ್ ರಾಜ್; ತನ್ನ ಪಾತ್ರವಿಲ್ಲವೆಂದು ತುಮಕೂರು ಎಸ್ಪಿಗೆ ಹೇಳಿಕೆ