ಶಿವಮೊಗ್ಗ/ ಬೆಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆಯ ಶಾರಿಕ್‌ನ ಹಿಂದೆ ನಿಂತು ಆಟ ಆಡಿಸುತ್ತಿರುವವರು ಅವನದೇ ಊರಿನವನಾದ ಅಬ್ದುಲ್ ಮತೀನ್! ಈ ವಿಚಾರವನ್ನು ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಅವರೇ ಹೇಳಿದ್ದಾರೆ. ಮಾತ್ರವಲ್ಲ ಮತೀನ್ ಖಾನ್‌ನ ಪತ್ತೆಗಾಗಿ ಹೈದರಾಬಾದ್‌ನ ಎನ್‌ಐಎ ಮೂರು ಲಕ್ಷ ರೂ. ಬಹುಮಾನ ಘೋಷಿಸಿದೆ.
ಯಾರಿವನು ಮತೀನ್ ಖಾನ್? ಎಂಥಾ ಖತರ್ನಾಕ್ ಕ್ರಿಮಿನಲ್?
ಅಬ್ದುಲ್ ಮತೀನ್ ಅಹ್ಮದ್ ತಾಹಾ (28) ಈತನ ಪೂರ್ತಿ ಹೆಸರು. ಮತೀನ್ ಖಾನ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ಮೀನು ಮಾರ್ಕೆಟ್ ರಸ್ತೆ ನಿವಾಸಿ. ಈತ ೨೦೨೦ರಿಂದ ಕಾಣೆಯಾಗಿದ್ದಾನೆ. ಈಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿ ಸಿಕ್ಕಿಬಿದ್ದಿರುವ ಮಹಮ್ಮದ್ ಶಾರಿಕ್ ಕೂಡಾ ಇದೇ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯವನು. ಇವರಿಬ್ಬರ ನಡುವೆ ಆತ್ಮೀಯವಾದ ಸಂಬಂಧವಿದ್ದು, ಮತೀನ್ ಖಾನ್‌ನೇ ಉಗ್ರ ಕೃತ್ಯದಲ್ಲಿ ಶಾರಿಕ್‌ಗೆ ಮಾರ್ಗದರ್ಶಕ ಎಂದು ತಿಳಿದುಬಂದಿದೆ. ಶಿವಮೊಗ್ಗ ಮೊಹ್ಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಎಂಬವರ ಜತೆ ಸೇರಿ ಶಾರಿಕ್ ಶಿವಮೊಗ್ಗದ ತುಂಗಾ ತೀರ ಮತ್ತು ಮಂಗಳೂರಿನ ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್‌ನಲ್ಲೂ ಈತನದೇ ಹಿನ್ನೆಲೆ ಸಹಕಾರವಿತ್ತು ಎನ್ನಲಾಗಿದೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತೀನ್
೨೮ ವರ್ಷದ ಮತೀನ್ ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆ ಹಾಗೂ ರಾಜ್ಯದಲ್ಲಿ ಐಸಿಸ್ ಚಟುವಟಿಕೆ ನಡೆಸಿದ ʻಅಲ್ ಹಿಂದ್ ಐಸಿಸ್’ ಸಂಘಟನೆಯ ಸಕ್ರಿಯ ಸದಸ್ಯ.
ಐಸಿಸ್ ಪ್ರಚೋದಿತ ಗುಂಪಿನ ಮೆಹಬೂಬ್ ಪಾಷಾ, ಖಾಜಾ ಮೊಯಿದ್ದೀನ್ ಸೇರಿದಂತೆ ಇತರರನ್ನು ಎನ್ಐಎ ಬಂಧಿಸಿತ್ತು. ಈ ವೇಳೆ ಆರೋಪಿಗಳು ರಾಜ್ಯದ ಅಬ್ದುಲ್ ಮತೀನ್ ಜತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯದ ಮನೆಯಲ್ಲಿ 2019ರಲ್ಲಿ ಮೆಹಬೂಬ್ ಪಾಷಾ ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಿದ್ದ. ಆ ಸಭೆಯಲ್ಲಿ ಅಬ್ದುಲ್ ಮತೀನ್ ಕೂಡ ಭಾಗಿಯಾಗಿದ್ದ. ಆರೋಪಿಗಳು ಇನ್ನೂ ಕೆಲ ಆರೋಪಿಗಳೊಂದಿಗೆ ಸೇರಿ ಸಭೆ ನಡೆಸಿದ್ದರು. ಆಫ್ಘಾನಿಸ್ತಾನ, ಸಿರಿಯಾದಲ್ಲಿ ಐಸಿಸ್ ಸೇರಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮುಸ್ಲಿಂ ಯುವಕರನ್ನು ಇವರು ಪ್ರಚೋದಿಸುತ್ತಿದ್ದರು. ಈ ತಂಡದ ಹಲವರು ಈಗಾಗಲೇ ಜೈಲುಪಾಲಾಗಿದ್ದಾರೆ. ಆದರೆ ಮತೀನ್ ಮಾತ್ರ ತಪ್ಪಿಸಿಕೊಂಡಿದ್ದಾನೆ. ಅವನ ಪತ್ತೆಗಾಗಿ ಎನ್‌ಐಎ ತೀವ್ರ ಪ್ರಯತ್ನದಲ್ಲಿದೆ. ಮತೀನ್ ತನ್ನ ಊರಾದ ಶಿವಮೊಗ್ಗದಲ್ಲೇ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ, ಜತೆಗೆ ಮಂಗಳೂರಿನಲ್ಲಿ ಸ್ಫೋಟ ನಡೆಸಿಯೇ ಬಿಟ್ಟಿದ್ದಾನೆ.
ಎಂಥಾ ಅಪ್ಪನಿಗೆ ಎಂಥಾ ಮಗ?
ಇಂಥ ಉಗ್ರನ ತಂದೆ ಮನ್ಸೂರ್ ಮಹಮದ್ ಅವರು ೨೬ ವರ್ಷ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಒಂದು ಸಜ್ಜನ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಮಗನ ಹೆಸರು ಮತ್ತೆ ಮೇಲೆದ್ದು ಬಂದಿರುವುದು ಅವರ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ವಿಸ್ತಾರ ನ್ಯೂಸ್ ಈ ಹಿಂದೆ ಮಾತನಾಡಿದ ವೇಳೆ ಮನ್ಸೂರ್ ಅಹಮದ್ ಅವರು ತಮ್ಮ ನೋವು ಹಂಚಿಕೊಂಡಿದ್ದರು.
ಸೈನಿಕನಾಗಿದ್ದ ಅಪ್ಪ ಹೇಳುವುದೇನು?
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ವಾಸಿಸುತ್ತಿರುವ ಮನ್ಸೂರ್ ಅಹಮದ್ ಅವರು ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ್ದಾರೆ. ತನ್ನ ಹಿರಿಯ ಮಗ ಈ ರೀತಿಯಾಗಿ ಉಗ್ರ ಸಂಘಟನೆಯ ಜತೆ ಸಂಬಂಧ ಹೊಂದಿರುವುದು ಅವರಿಗೆ ತುಂಬ ನೋವುಂಟು ಮಾಡಿದೆ. ಇಂಥ ಘಟನೆಗಳು ಮನೆಯವರಿಗೆ ನೀಡುವ ನೋವು, ಅವರು ಅನುಭವಿಸುವ ಯಾತನೆ ಈ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ʻʻಅವನು ನನ್ನ ದೊಡ್ಡ ಮಗ. ಅವನಿಗೆ ೨೮ ವರ್ಷ. ನನ್ನ ಮತ್ತೊಬ್ಬ ಮಗ ಹೋಟೆಲ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದಾನೆ. ಮಗಳು ಪಿಯುಸಿ. ಯತೀನ್ ಬಿಇ. ಮಾಡುತ್ತೇನೆ ಎಂದು ಬೆಂಗಳೂರಿಗೆ ಹೋಗಿದ್ದ. ಆದರೆ ವಿದ್ಯಾಭ್ಯಾಸ ಡಿಸ್ ಕಂಟಿನ್ಯೂ ಮಾಡಿದ್ದಾನೆ. ಎಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ೨೦೨೦ರಲ್ಲಿ ಅವನು ಇರುವ ಜಾಗದಲ್ಲಿ ಏನೋ ಸಮಸ್ಯೆ ಆಯಿತು ಅಂತ ಗೊತ್ತಾಯಿತು. ಮತೀನ್ 2020 ರಿಂದ ಇಲ್ಲಿಯವರೆಗೂ ಎಲ್ಲಿದ್ದಾನೆಂದು ಗೊತ್ತಿಲ್ಲ. ಆವತ್ತಿನಿಂದ ನಮಗೆ ಯಾವುದೇ ಸಂಪರ್ಕದಲ್ಲಿ ಇಲ್ಲʼʼ ಎಂದು ಹೇಳಿದರು ಮನ್ಸೂರ್ ಅಹಮದ್.
ʻʻನಾನು ೨೬ ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮಗ ಹೀಗೆ ಆಗಿದ್ದಾನೆ ಅಂತ ಯೋಚನೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವನು ನಮ್ಮ ಮನೆಯ ಹಿರಿಮಗ. ನನ್ನ ಈ ವಯಸ್ಸಿನಲ್ಲಿ ಮನೆಗೆ ಆಧಾರವಾಗಿರಬೇಕಾಗಿದ್ದವನು. ಅವನಿಗೆ ಈ ಉಗ್ರರ ನಂಟು ಎಲ್ಲಿಂದ ಬಂತೋ ಗೊತ್ತಿಲ್ಲʼʼ ಎಂದು ಮನ್ಸೂರ್ ಅಹಮದ್ ಹೇಳಿದರು.
ʻʻಯಾರು ಬ್ರೇನ್ ವಾಷ್ ಮಾಡುತ್ತಾರೆ ಅಂತ ಗೊತ್ತಿಲ್ಲ. ಈಗ ಮೊಬೈಲ್‌ನಲ್ಲಿ ಯಾರ್ಯಾರು ಸಂಪರ್ಕಕ್ಕೆ ಸಿಗುತ್ತಾರೋ ಅವರೇನು ಹೇಳುತ್ತಾರೋ ಗೊತ್ತಿಲ್ಲ. ನಾವು ಅವನನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ನೋವು ನಮಗೆ ಮತ್ತು ದೇವರಿಗೆ ಮಾತ್ರ ಗೊತ್ತುʼʼ ಎಂದು ನೋವಿನಿಂದ ಹೇಳಿಕೊಂಡಿದ್ದರು ಮನ್ಸೂರ್.
ವಿದ್ಯಾವಂತ ಯುವಕರೇ ಹೀಗೇಕಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲ ವಿದ್ಯಾವಂತರಾಗಿ ಮನೆಗೆ ಆಧಾರವಾಗಬೇಕು. ಅದರೆ, ಅವರೇ ಭಾಗವಾಗುತ್ತಿರುವುದು ನಮಗೆ ದಿಕ್ಕು ತೋಚದಂತಾಗಿದೆ ಎಂದರು. ಈಗ ಉಗ್ರ ಜಾಲದಲ್ಲಿದ್ದಾರೆಂದು ಗುರುತಿಸಲಾಗಿರುವ ಶಾರಿಕ್, ಯಾಸಿನ್, ಮಾಝ್ ಎಲ್ಲ ಸ್ನೇಹಿತರಾ ಎಂಬ ಪ್ರಶ್ನೆಗೆ, ಒಂದೇ ಊರಿನ ಮಕ್ಕಳು, ಸ್ನೇಹಿತರು ಹೌದೋ ಅಲ್ವೋ ಗೊತ್ತಿಲ್ಲ ಎಂದಿದ್ದರು.
ಬೆಳೆದು ಆಸರೆಯಾಗಿರಬೇಕಾಗಿದ್ದ ಮಕ್ಕಳು ಈ ರೀತಿ ದಿಕ್ಕು ತಪ್ಪಿ ಉಗ್ರರಾಗುತ್ತಿರುವುದು ಈ ಮಾಜಿ ಸೈನಿಕನ ಮನಸ್ಸಲ್ಲಿ ಗಾಢವಾದ ನೋವು ಉಂಟು ಮಾಡಿದ್ದು ಮಾತಿನ ಮಧ್ಯೆ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ನ ಹಿಂದಿದ್ದಾನೆ ಮತ್ತೊಬ್ಬ ಮೇನ್ ಹ್ಯಾಂಡ್ಲರ್ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ